ನವದೆಹಲಿ: ದೇಶದಲ್ಲಿ ಈಗಾಗಲೇ ಅಸಂಖ್ಯಾತ ಮೈತ್ರಿಕೂಟಗಳು, ಬಣಗಳು ಮತ್ತು ಪಕ್ಷಾಂತರಗಳ ಅಬ್ಬರವಿರುವಾಗಲೇ, ಭಾರತೀಯ ರಾಜಕೀಯ ಈಗ ಅತ್ಯಂತ ವಿಚಿತ್ರವಾದ ಜೈವಿಕ ವೈವಿಧ್ಯತೆಯ ಯುಗಕ್ಕೆ ಸಾಕ್ಷಿಯಾಗಿದೆ. ನಿರುದ್ಯೋಗಿ ಯುವಕರನ್ನು ʻಜಿರಳೆಗಳುʼ ಮತ್ತು ʻಪರಾವಲಂಬಿಗಳುʼ ಎಂದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುವ ಬದಲಿಗೆ, ಇಂಟರ್ನೆಟ್ ಜಗತ್ತು ಅದನ್ನು ವಿಡಂಬನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇದರ ಪರಿಣಾಮವಾಗಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಮತ್ತು ‘ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್’ (NPF) ಎಂಬ ಎರಡು ಕಾಲ್ಪನಿಕ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

ಅಭಿಜೀತ್ ದಿಪ್ಕೆ ಎಂಬುವವರಿಂದ ಮೇ 16 ರಂದು ಆರಂಭವಾದ ʻಕಾಕ್‌ರೋಚ್ ಜನತಾ ಪಾರ್ಟಿ’ (CJP) ಕೇವಲ ಕೆಲವೇ ದಿನಗಳಲ್ಲಿ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಗಳಿಸುವ ಮೂಲಕ ಇಂಟರ್ನೆಟ್ ಸುನಾಮಿ ಎಬ್ಬಿಸಿದೆ. ತಮಗೆ ತಾವೇ “ಸೋಮಾರಿಗಳು ಮತ್ತು ನಿರುದ್ಯೋಗಿಗಳ ಧ್ವನಿ” ಎಂದು ಕರೆದುಕೊಳ್ಳುವ ಈ ಜಿರೆಳೆ ಪಕ್ಷದ ಪ್ರಧಾನ ಕಚೇರಿ “ವೈಫೈ ಸಿಗುವ ಪ್ರತಿಯೊಂದು ಜಾಗ”. ಕೇವಲ ಮೀಮ್ಸ್‌ಗಳ ಮೂಲಕವೇ ಯುವ ಸಮೂಹವನ್ನು ಸೆಳೆದಿರುವ ಈ ಪಕ್ಷದ ಬೆಳವಣಿಗೆಗೆ ರಾಜಕಾರಣಿಗಳಾದ ಮಹುವಾ ಮುಯಿತ್ರಾ ಮತ್ತು ಕೀರ್ತಿ ಆಜಾದ್ ಅವರಂತಹವರೂ ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸುವ ಮೂಲಕ ಸಾಥ್ ನೀಡಿದ್ದಾರೆ. ಯಮುನಾ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರು ಜಿರಳೆಗಳ ವೇಷ ಧರಿಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಪ್ರತಿಪಕ್ಷವಾಗಿ ಎದ್ದುನಿಂತ ʻನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್’!(ರಾಷ್ಟ್ರೀಯ ಪರಾವಲಂಬಿ ಒಕ್ಕೂಟ)
ರಾಜಕೀಯದಲ್ಲಿ ಶೂನ್ಯತೆಗೆ ಜಾಗವಿಲ್ಲ ಎನ್ನುವಂತೆ, ಸಿಜೆಪಿ ಪಕ್ಷಕ್ಕೆ ಕೌಂಟರ್ ನೀಡಲು ‘ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್’(ರಾಷ್ಟ್ರೀಯ ಪರಾವಲಂಬಿ ಒಕ್ಕೂಟ- (NPF) ಎಂಬ ಮತ್ತೊಂದು ವಿಡಂಬನಾತ್ಮಕ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ವ್ಯವಸ್ಥೆಯು ಜನಸಾಮಾನ್ಯರನ್ನು ಹೇಗೆ ಹಿಂಡಿ ಹಿಪ್ಪೆ ಮಾಡುತ್ತಿದೆ ಎಂಬುದನ್ನು ವ್ಯಂಗ್ಯವಾಡಲು ಇವರು “ಪರಾವಲಂಬಿ” (Parasite) ಎಂಬ ಪದವನ್ನೇ ಬ್ರ್ಯಾಂಡ್ ಮಾಡಿಕೊಂಡಿದ್ದಾರೆ. “ನಾವು ಈ ಹಾಳಾದ ವ್ಯವಸ್ಥೆಗೆ ಅಂಟಿಕೊಂಡಿರುವುದು ಅದರ ರಕ್ತ ಹೀರುವುದಕ್ಕಲ್ಲ, ಬದಲಿಗೆ ವ್ಯವಸ್ಥೆಯನ್ನು ಒಳಗಿನಿಂದಲೇ ಬದಲಾಯಿಸಲು” ಎಂದು ಸಾರುವ ಎನ್‌ಪಿಎಫ್, ದೇಶದಲ್ಲಿ ಸುಶಿಕ್ಷಿತ ಜನಪ್ರತಿನಿಧಿಗಳು ಇರಬೇಕು ಮತ್ತು ಮಳೆ ಬಂದರೆ ರಸ್ತೆಗಳು ನದಿಯಾಗಬಾರದು ಎಂಬ ಗಂಭೀರ ಆಶಯಗಳನ್ನು ಹಾಸ್ಯದ ಮೂಲಕ ಮಂಡಿಸುತ್ತಿದೆ.

ಈ ಎರಡೂ ಪಕ್ಷಗಳ ಪ್ರಣಾಳಿಕೆಗಳು ಇಂದಿನ ಯುವ ಪೀಳಿಗೆಯ ನೈಜ ನೋವು ಮತ್ತು ಆಕ್ರೋಶದ ಪ್ರತಿಬಿಂಬಗಳಾಗಿವೆ. ಜಿರಳೆ ಪಕ್ಷವು ತರಹೇವಾರಿ ಪರೀಕ್ಷೆಗಳ ಒತ್ತಡ, ನಿರುದ್ಯೋಗ, ಹಣದುಬ್ಬರ ಮತ್ತು “ಬೆಟಾ, ಈಗೇನು ಮಾಡ್ತಿದ್ದೀಯಾ?” ಎಂದು ಕೇಳುವ ನೆಂಟರ ಕಾಟದಿಂದ ನೊಂದ ಯುವಕರನ್ನು ಪ್ರತಿನಿಧಿಸಿದರೆ, ಪ್ಯಾರಾಸಿಟಿಕ್ ಫ್ರಂಟ್ ಕ್ರಾಂತಿಕಾರಿ ಭಾಷೆಯ ಮೂಲಕ ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಜಾತಿ ಲೆಕ್ಕಾಚಾರ ಮತ್ತು ಉಚಿತ ಕೊಡುಗೆಗಳ ಮೇಲೆ ಚುನಾವಣೆ ಎದುರಿಸಿದರೆ, ಈ ಡಿಜಿಟಲ್ ಪಕ್ಷಗಳು ಕೇವಲ ‘ಮೀಮ್ಸ್’ (Memes) ಮತ್ತು ವ್ಯಂಗ್ಯಚಿತ್ರಗಳನ್ನೇ ತಮ್ಮ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡಿವೆ.

ಇದು ಬರೀ ಜೋಕ್ ಅಲ್ಲ, ಡಿಜಿಟಲ್ ಪ್ರತಿಭಟನೆಯ ಹೊಸ ರೂಪ!
ಭಾರತದಲ್ಲಿ ರಾಜಕೀಯ ವಿಡಂಬನೆ ಹೊಸದೇನಲ್ಲದಿದ್ದರೂ, ಸಿಜೆಪಿ ಮತ್ತು ಎನ್‌ಪಿಎಫ್ ಕೇವಲ ಜನ ನೋಡುವ ಹಾಸ್ಯವಾಗಿ ಉಳಿದಿಲ್ಲ; ಬದಲಿಗೆ ಜನರು ಸ್ವಯಂಪ್ರೇರಿತರಾಗಿ ಸೇರಿಕೊಳ್ಳುತ್ತಿರುವ ವಿಭಿನ್ನ ಆಂದೋಲನವಾಗಿ ಮಾರ್ಪಟ್ಟಿದೆ. ಹಳೇ ಕಾಲದಲ್ಲಿ ಯುವಕರು ಪ್ಲಕಾರ್ಡ್ ಹಿಡಿದು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದರೆ, 2026ರ ಈ ಇಂಟರ್ನೆಟ್ ಯುಗದ ಯುವಕರು ಬೆಳ್ಳಂಬೆಳಗ್ಗೆ ವೆಬ್‌ಸೈಟ್ ಲಾಂಚ್ ಮಾಡಿ, ಲೋಗೋ ಸೃಷ್ಟಿಸಿ, ನಕಲಿ ಸಂವಿಧಾನ ಬರೆದು ಮಧ್ಯಾಹ್ನದ ಹೊತ್ತಿಗೆ ಲಕ್ಷಾಂತರ ಫಾಲೋವರ್ಸ್ ಸಂಪಾದಿಸುತ್ತಿದ್ದಾರೆ.

ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದಿದ್ದರೂ, ಇಂದಿನ ಗ್ರಹಿಕೆ ಹಾಗೂ ಪ್ರಚಾರವೇ ಸರ್ವಸ್ವವಾಗಿರುವ ರಾಜಕೀಯ ವಾತಾವರಣದಲ್ಲಿ ಈ ಪಕ್ಷಗಳು ಯಶಸ್ವಿಯಾಗಿವೆ. ಯುವ ಸಮೂಹದ ನಿರುದ್ಯೋಗದ ಹತಾಶೆ ಹಾಗೂ ರಾಜಕಾರಣಿಗಳ ಮೇಲಿನ ಅಸಮಾಧಾನವನ್ನು ಹೊರಹಾಕಲು ಈ ವಿಡಂಬನಾತ್ಮಕ ವೇದಿಕೆಗಳು ಕನ್ನಡಿಯಾಗಿವೆ. ಭಾಷೆ, ಧರ್ಮ, ಜಾತಿಗಳ ಆಧಾರದ ಮೇಲೆ ಮೈತ್ರಿಕೂಟಗಳನ್ನು ಕಂಡಿದ್ದ ಭಾರತೀಯ ರಾಜಕೀಯ ರಂಗ, ಈಗ ಕೀಟಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಡಿಜಿಟಲ್ ಕ್ರಾಂತಿಯಿಂದಾಗಿ ಒಂದೇ ಸಮಯದಲ್ಲಿ ಜನರನ್ನು ನಗಿಸುವ ಹಾಗೂ ಯೋಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.