
ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಜಿಲ್ಲಾಸ್ಪತ್ರೆಯಿಂದ ಹಿಡಿದು ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಸುಮಾರು 24 ಗಂಟೆಗಳ ಕಾಲ ಆಂಬುಲೆನ್ಸ್‌ನಲ್ಲೇ ನರಳಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಅರೆನೂರು ಬಳಿ ಈ ಯುವಕ ರವಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರೆಫರ್ ಮಾಡಿದರು.

ಗಾಯಾಳು ಯುವಕನನ್ನು ಆಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕರೆದೊಯ್ದ ಪೋಷಕರು, ಅಲ್ಲಿನ ಸುಮಾರು 8ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತಿರುಗಾಡಿದರೂ ಅವರಿಗೆ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಸರ್ಜನ್ ಇಲ್ಲ ಎಂದು ವಾಪಸ್ ಕಳಿಸಿದ್ದಾರೆ. . ಮತ್ತೊಂದು ಆಸ್ಪತ್ರೆಯಲ್ಲೂ ಬೆಡ್ ಇಲ್ಲದೆ ಚಿಕಿತ್ಸೆ ನೀಡಿಲ್ಲ. ಅಲ್ಲಿಂದ ಮುಕ್ಕಾದಲ್ಲಿರೋ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ರೂ. 80,000 ಪಾವತಿಸಿದರಷ್ಟೇ ಚಿಕಿತ್ಸೆ ಸಿಗಲಿದೆ ಎಂದಿದ್ದಾರೆ. ಗಾರೆ ಕೆಲಸ ಮಾಡುವ ಬಡ ಕುಟುಂಬವಾಗಿರುವುದರಿಂದ ದುಬಾರಿ ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೆ ಆಂಬುಲೆನ್ಸ್‌ನಲ್ಲೇ ಮಗನನ್ನ ಕರೆತಂದು ರಸ್ತೆ ಬದಿ ನಿಲ್ಲಿಸಿಕೊಂಡಿದ್ದರು. ಬಳಿಕ ಆಲ್ದೂರು ಗ್ರಾಮಸ್ಥರು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯುವಂತೆ ಸೂಚಿಸಿ ಕಳಿಸಿಕೊಟ್ಟಿದ್ದಾರೆ.

ಘಟನೆಯಿಂದ ಕೋಪಗೊಂಡ ಸಾರ್ವಜನಿಕರು, “ಚಿಕ್ಕಮಗಳೂರಿನಲ್ಲೇ ಮೆಡಿಕಲ್ ಕಾಲೇಜು ಮತ್ತು ಸೌಲಭ್ಯಗಳಿದ್ದರೂ ರೋಗಿಗಳನ್ನು ಹೊರ ಜಿಲ್ಲೆಗಳಿಗೆ ರೆಫರ್ ಮಾಡುವುದು ಸೂಕ್ತವಲ್ಲ. ಸರ್ಕಾರ ತಕ್ಷಣ ಈ ವ್ಯವಸ್ಥೆಯನ್ನು ಸುಧಾರಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.