
ಬೆಳಗಾವಿ: ತೀವ್ರ ಸಂಚಲನ ಮೂಡಿಸಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಮೊದಲ ಅಧಿಕೃತ ಖಾಸಗಿ ದೂರು ದಾಖಲಾಗಿದೆ. ಹೂಡಿಕೆದಾರ ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬುವವರು ಕಾಗವಾಡ ಪೊಲೀಸ್ ಠಾಣೆಯಲ್ಲಿ ವಂಚನೆ ಕುರಿತು ದೂರು ನೀಡಿದ್ದಾರೆ.

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ ಕಾಗವಾಡ ತಾಲೂಕಿನ ಹೂಡಿಕೆದಾರ ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬುವವರು ಮೊದಲ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಠೇವಣಿ ಹಣದ ಮೇಲೆ ವಾರ್ಷಿಕ ಶೇಕಡಾ 36 ರಷ್ಟು ಭಾರಿ ಬಡ್ಡಿ ನೀಡುವುದಾಗಿ ನಂಬಿಸಿದ್ದ ಶಿವಾನಂದ ನೀಲಣ್ಣವರ ಮಾತುಗಳನ್ನು ನಂಬಿ ಕೃಷ್ಣಾ ಅಪ್ರಾಜ್ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಹಂತ ಹಂತವಾಗಿ ಒಟ್ಟು 5 ಲಕ್ಷ ರೂಪಾಯಿಗಳನ್ನು ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು, ಆದರೆ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿಯೂ ನೀಡದೆ, ಅಸಲನ್ನೂ ಮರಳಿಸದೆ ನಂಬಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸದ್ಯ ಈ ಇಡೀ ಬಹುಕೋಟಿ ವಂಚನೆ ಹಗರಣದ ತನಿಖೆ ಸಿಐಡಿಗೆ ಹಸ್ತಾಂತರಗೊಳ್ಳುತ್ತಿದ್ದಂತೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
