ಪ್ರಿಯತಮೆ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನ!!

ಆನೇಕಲ್: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ಚಿನ್ನಯ್ಯನಪಾಳ್ಯದ ನಿವಾಸಿ ಸೋಮಶೇಖರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಲವ್ ಬ್ರೇಕಪ್‌ಗೆ ಮುಂದಾಗಿದ್ದಾಳೆ. ಇದರಿಂದ ತೀವ್ರ ಆಕ್ರೋಶಗೊಂಡ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದಾನೆ. ಅದಾದ ಬಳಿಕ ಮನೆ ಸಮೀಪದಲ್ಲೇ ಇದ್ದ ಭಾರಿ ಗಾತ್ರದ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೇರಿದ್ದಾನೆ. ‘ತಾನು ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ’ ಎಂದು ಕಂಬದ ಮೇಲಿಂದಲೇ ಪಟ್ಟು ಹಿಡಿದು ಕಿರುಚಾಡಿದ್ದಾನೆ. ಈತನ ಹುಚ್ಚಾಟದಿಂದಾಗಿ ಇಡೀ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಗಂಟೆಗಟ್ಟಲೆ ಆತಂಕದಲ್ಲಿ ಕಳೆಯುವಂತಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಕಂಬದ ಸುತ್ತಲೂ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಯುವಕನಿಗೆ ತಿಳಿಹೇಳಿ ಕೆಳಗಿಳಿಸಲು ಶತಪ್ರಯತ್ನ ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಕೆಳಗಿಳಿಯಲು ಒಪ್ಪದೆ ಹಠ ಹಿಡಿದಿದ್ದಾನೆ. ಕಂಬದಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಆಪಾಯವಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

error: Content is protected !!