ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕಾರವಾರ ಮೂಲದ ಬೃಹತ್ ಪರ್ಷಿಯನ್ ಮಾದರಿಯ ಬೋಟ್ ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದ್ದು, ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.


ಕಾರವಾರದ ಮುದಗಾ ನಿವಾಸಿ ದಿನೇಶ್ ಕಾಂಚನ್ ಎಂಬುವವರಿಗೆ ಸೇರಿದ ‘ಶ್ರೀ ಅಮ್ಮ’ ಹೆಸರಿನ ಪರ್ಷಿಯನ್ ಬೋಟ್ ಒಂದು ವಾರದ ಹಿಂದೆ ಮುದಗಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ತಾಂತ್ರಿಕ ಕಾರಣಗಳಿಂದ ಬೋಟ್ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದೆ.

ಬೋಟ್ ಮುಳುಗಡೆಯಾಗುತ್ತಿದ್ದನ್ನು ಗಮನಿಸಿದ ಹತ್ತಿರದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇತರ ಬೋಟ್‌ನ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 22 ಮೀನುಗಾರರನ್ನು ಸುರಕ್ಷಿತವಾಗಿ ಬೇರೆ ಬೋಟ್‌ಗಳಿಗೆ ಸ್ಥಳಾಂತರಿಸುವ ಮೂಲಕ ಅವರ ಜೀವ ಉಳಿಸಿದ್ದಾರೆ.

ಬೋಟ್ ಸಂಪೂರ್ಣವಾಗಿ ಸಮುದ್ರದ ಪಾಲಾಗಿದ್ದು, ಇದರಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು ಹಾಗೂ ಇತರ ಸಲಕರಣೆಗಳು ನಾಶವಾಗಿವೆ. ಈ ದುರಂತದಿಂದ ಬೋಟ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
