ಸುರತ್ಕಲ್ NH-66 ರಲ್ಲಿ ಅಪಘಾತ ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ: ಆಪತ್ಭಾಂಧವ ಸಂಘ ಮನವಿ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ರ ಸುರತ್ಕಲ್ ವ್ಯಾಪ್ತಿಯಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಕುರಿತು ಆಪತ್ಭಾಂಧವ ಸಮಾಜ ಸೇವಾ ಸಂಘ (ರಿ.) ಸುರತ್ಕಲ್ ಇದರ ನಿಯೋಗವು, ಸಂಘದ ಸ್ಥಾಪಕ ಅಧ್ಯಕ್ಷರಾದ ಉಮೇಶ್ ದೇವಾಡಿಗ ಇಡ್ಯಾ ಅವರ ನೇತೃತ್ವದಲ್ಲಿ ಈ ನಿಯೋಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಇಂಜಿನಿಯರ್ ಅಬ್ದುಲ್ ಜಾವೇದ್ ಅಜ್ಮಿ ಅವರನ್ನು ಭೇಟಿ ಮಾಡಿ ತುರ್ತು ಮನವಿ ಸಲ್ಲಿಸಿತು.

ಮುಲ್ಕಿಯ ಪ್ರಮುಖ ನಿಲ್ದಾಣದ ಹೆದ್ದಾರಿ ತಿರುವು ಮತ್ತು ಮುಲ್ಕಿಯಿಂದ ಕಾರ್ನಾಡು ರಸ್ತೆಗೆ ತೆರಳುವ ತಿರುವು, ಈ ಎರಡೂ ಪ್ರದೇಶಗಳಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಘದವರು ತಿಳಿಸಿದರು. ಈ ಪೈಕಿ ಯಾವುದಾದರೂ ಒಂದು ತಿರುವನ್ನು ಮುಚ್ಚಿದಲ್ಲಿ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು ಎಂದು ಮನವಿ ಮಾಡಿಕೊಂಡರು.

ಎನ್ಐಟಿಕೆ ಮುಂಭಾಗದ ಹೆದ್ದಾರಿ ಡಿವೈಡರ್ ರಸ್ತೆಯನ್ನು ಈಗಾಗಲೇ ಮುಚ್ಚಲಾಗಿದೆ. ಈ ಹಿಂದೆ ಈ ಮಾರ್ಗದಲ್ಲಿ ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಸಂಚರಿಸಲು ಅನುಕೂಲಕರವಾಗಿತ್ತು. ಆದರೆ ಈಗ ಅದು ಮುಚ್ಚಲಾದ ಹಿನ್ನೆಲೆಯಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕದ ಡಿವೈಡರ್‌ನಲ್ಲಿ ತಿರುವು ಪಡೆಯುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೇ ಸರ್ವಿಸ್ ರಸ್ತೆ ಅತ್ಯಂತ ಕಿರಿದಾಗಿದ್ದು ಅದನ್ನು ಅಗಲಪಡಿಸಬೇಕು ಎಂದು ಸಂಘದವರು ಆಗ್ರಹಿಸಿದರು.

ಎನ್ಐಟಿಕೆ-ಮುಂಚೂರು ಕ್ರಾಸ್ನ ಹೆದ್ದಾರಿ ರಸ್ತೆಯಲ್ಲಿ ಸಿಗ್ನಲ್ ಲೈಟ್ ಅಳವಡಿಕೆಯ ಅವಶ್ಯಕತೆಯಿದೆ ಎಂದು ತಿಳಿಸಲಾಯಿತು. ಅಲ್ಲದೇ ತಡಂಬೈಲು ದುರ್ಗಾಂಬ ದೇವಸ್ಥಾನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ತೀವ್ರ ತಿರುವನ್ನು ಹೊಂದಿದೆ. ಹೊರರಾಜ್ಯಗಳಿಂದ ವೇಗವಾಗಿ ಬರುವ ವಾಹನಗಳು ಈ ತಿರುವಿನ ಅರಿವಿಲ್ಲದೇ ಡಿವೈಡರ್ಗೆ ಅಪ್ಪಳಿಸುತ್ತಿವೆ ಅಥವಾ ಪಲ್ಟಿಯಾಗುತ್ತಿವೆ. ಈ ಭಾಗದಲ್ಲಿ ಹಲವಾರು ಪ್ರಾಣಹಾನಿ ಸಂಭವಿಸಿದೆ.

ತಡಂಬೈಲಿನಿಂದ ಮುಂದೆ ಸೂರಜ್ ಇಂಟರ್ನ್ಯಾಷನಲ್ ಹೋಟೆಲ್ ಮುಂಭಾಗದ ಡಿವೈಡರ್ ಭಾಗದಲ್ಲೂ ಸಾಕಷ್ಟು ಅಪಘಾತಗಳು ಮತ್ತು ಪ್ರಾಣಹಾನಿಗಳು ಸಂಭವಿಸಿವೆ. ಈ ಭಾಗದಲ್ಲಿ ಸಿಗ್ನಲ್ ಲೈಟ್ ಮತ್ತು ಸ್ಪೀಡ್ ಬ್ರೇಕರ್ಗಳನ್ನು ಅಳವಡಿಸಬೇಕು. ಸುರತ್ಕಲ್ ಜಂಕ್ಷನ್ ಭಾಗದಲ್ಲಿ ವಾಹನಗಳು ಅತಿವೇಗದಲ್ಲಿ ಹಾದುಹೋಗುತ್ತಿದ್ದು, ರಸ್ತೆ ದಾಟುವ ಪಾದಚಾರಿಗಳು ಮತ್ತು ಇತರ ವಾಹನಗಳಿಗೆ ಅಪಾಯಕಾರಿಯಾಗಿದೆ. ಹೀಗಾಗಿ ಈ ಜಂಕ್ಷನ್ನಲ್ಲೂ ಸ್ಪೀಡ್ ಬ್ರೇಕರ್ ಅವಶ್ಯಕವಾಗಿದೆ.

ಸುರತ್ಕಲ್ ಪೇಟೆಯಿಂದ ಅಥರ್ವ ಆಸ್ಪತ್ರೆಯವರೆಗಿನ ಸರ್ವಿಸ್ ರಸ್ತೆಯನ್ನು ಅಗಲೀಕರಣ ಮಾಡಬೇಕು. ಗೋವಿಂದದಾಸ ಕಾಲೇಜು ಮುಂಭಾಗದ ಪ್ರದೇಶವು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು, ಆಟೋ ಚಾಲಕರು ಹಾಗೂ ವಾಹನ ಸವಾರರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಎಲ್ಲಾ ದಿಕ್ಕುಗಳಿಂದಲೂ ವಾಹನಗಳು ಸೇರುವ ಈ ಭಾಗದಲ್ಲಿ ಅಂಡರ್ಪಾಸ್ ಅಥವಾ ಮೇಲ್ಸೇತುವೆಯನ್ನು ನಿರ್ಮಿಸಬೇಕು ಎಂದು ಸಂಘದವರು ಬಲವಾಗಿ ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿದ ಪ್ರಾಜೆಕ್ಟ್ ಇಂಜಿನಿಯರ್ ಅಬ್ದುಲ್ ಜಾವೇದ್ ಅಜ್ಮಿ ಅವರು, ಅದಷ್ಟು ಬೇಗನೆ ಸರ್ವಿಸ್ ರಸ್ತೆಯ ನಿರ್ಮಾಣ, ಅಗಲೀಕರಣ , ಆಟೋಮ್ಯಾಟಿಕ್ ಟ್ರಾಫಿಕ್ ಸಿಗ್ನಲ್ ಅಳವಡಿಸುವಿಕೆ , ಎಚ್ಚರಿಕೆಯ ನಾಮ ಫಲಕ, ಸ್ಪೀಡ್ ಬ್ರೇಕರ್ ಇತ್ಯಾದಿ ಕ್ರಮಗಳ ಬಗ್ಗೆ ಗಮನ ಹರಿಸಿ, ಜನರ ಜೀವ ಉಳಿಸುವ ವ್ಯವಸ್ಥೆಯನ್ನು ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಪತ್ಭಾಂದವ ಸಂಘಟನೆಯ ಅಧ್ಯಕ್ಷರಾದ ಉಮೇಶ್ ಇಡ್ಯಾ ಇವರಿಗೆ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರು ಭರವಸೆ ನೀಡಿದರು.

error: Content is protected !!