ಕಾಸರಗೋಡು: ತನ್ನ ಭಾವಿ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆಯಿಂದ ತೀವ್ರವಾಗಿ ನೊಂದಿದ್ದ 26 ವರ್ಷದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕುಂಬ್ಳೆ ಸಮೀಪದ ಕಿಡೂರಿನಲ್ಲಿ ನಡೆದಿದೆ.

ಕಿಡೂರಿನ ಕುಂದಂಕೆರಾಡುಕ್ಕ ನಿವಾಸಿ ಬಿ. ಜಯಾನಂದನ್ ಅವರ ಪುತ್ರಿ ಪ್ರಫುಲ್ಲಾ (26) ಮೃತಪಟ್ಟ ಯುವತಿ.
ಈಕೆಗೆ ತಮಿಳುನಾಡು ಮೂಲದ ಮಣಿ (30) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ನಡೆದ ಭೀಕರ ಮೋಟಾರ್ ಸೈಕಲ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತನ್ನ ಬಾಳ ಸಂಗಾತಿಯಾಗಬೇಕಿದ್ದವನ ಅಗಲಿಕೆಯನ್ನು ಸಹಿಸಲಾರದೆ ಪ್ರಫುಲ್ಲಾ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯವರೆಲ್ಲರೂ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರಫುಲ್ಲಾ ಈ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಕುಂಬ್ಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಡೆತ್ ನೋಟ್‌ನಲ್ಲಿ ಕೊನೆಯ ಇಚ್ಛೆ:
ಆತ್ಮಹತ್ಯೆಗೂ ಮುನ್ನ ಪ್ರಫುಲ್ಲಾ ಬರೆದಿದ್ದಾರೆನ್ನಲಾದ ಪತ್ರವೊಂದು ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ, “ನನ್ನನ್ನು ಮಣಿಯನ್ನು ಹೂಳಲಾದ ಸ್ಥಳದಲ್ಲೇ ದಫನ ಮಾಡಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ಭಾವನಾತ್ಮಕ ಬೇಡಿಕೆಯ ಬಗ್ಗೆ ಎರಡೂ ಕುಟುಂಬದ ಸದಸ್ಯರು ಚರ್ಚಿಸಿ ಅಂತ್ಯಸಂಸ್ಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
