ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡಿನ ಜನಪ್ರಿಯ ವನಿತಾವನ ಪಾರ್ಕ್ ನವೀಕರಣಗೊಳ್ಳಲಿದ್ದು, ಇದರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ ನೆರವೇರಿಸಿದರು.

ಪಾರ್ಕ್‌ನಲ್ಲಿ ದಿನನಿತ್ಯ ವಾಕಿಂಗ್ ಮಾಡುವವರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರೂ. 12 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಪಾರ್ಕ್‌ಗೆ ಆಕರ್ಷಕವಾದ ಅಲಂಕಾರಿಕ ವಿದ್ಯುತ್ ದೀಪಗಳು, ಸುಸಜ್ಜಿತ ಜಿಮ್ ಸಲಕರಣೆಗಳು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, “ಈ ಪಾರ್ಕಿಗೆ ದಿನನಿತ್ಯ ನೂರಾರು ಸಾರ್ವಜನಿಕರು ಬರುತ್ತಾರೆ. ಅವರ ಅನುಕೂಲಕ್ಕಾಗಿ ಹಲವು ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ವರ ಸಹಕಾರದೊಂದಿಗೆ ಈ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರಿಗೆ ಉಪಯೋಗವಾದರೆ ಅದೇ ನಮಗೆ ಸಂತೋಷ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡುವುದಿಲ್ಲ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಡಾ (MUDA) ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಜಯರಾಮ್ ಶೆಟ್ಟಿ, ವೆಂಕಟೇಶ್ ಆಚಾರ್, ರಘುನಾಥ್ ಪ್ರಭು, ಮೋಹನ್ ಆಚಾರ್, ಮಾಲಾ, ಸೀತಾ, ಯಶ್ ರಾಜ್, ಗಣೇಶ್ ಕಾಮತ್, ಮೂಡಾ ಅಧಿಕಾರಿಗಳು ಹಾಗೂ ಪ್ರತಿನಿತ್ಯ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವ ಸಾರ್ವಜನಿಕರು ಉಪಸ್ಥಿತರಿದ್ದರು.
