ಉಡುಪಿ: ಉದ್ಯಮಿ ಸುದೀಪ್ ಆತ್ಮಹತ್ಯೆ ಪ್ರಕರಣ ಈಗ ‘ಪತ್ನಿ ವರ್ಸಸ್ ಕುಟುಂಬಸ್ಥರು’ ಎಂಬ ಹಂತಕ್ಕೆ ತಲುಪಿದೆ. ಸುದೀಪ್ ಸಾವಿಗೆ ಪತ್ನಿ ಸೌಮ್ಯ ಅವರೇ ಕಾರಣ ಎಂಬ ಆರೋಪಗಳಿಗೆ ತಿರುಗೇಟು ನೀಡಿರುವ ಸೌಮ್ಯ, “ನಾನು ವಿಷ ಕೊಟ್ಟಿಲ್ಲ, ಸುದೀಪ್ ಸಾವಿಗೆ ಅವರ ಮನೆಯವರ ಕಿರುಕುಳವೇ ಕಾರಣ” ಎಂದು ಬಾಂಬ್ ಸಿಡಿಸಿದ್ದಾರೆ.

ಗುರುವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಅತ್ತೆ, ಮಾವ ಮತ್ತು ವೇಣು ಶೆಟ್ಟಿ ವಿರುದ್ಧ ಗುಡುಗಿದ್ದಾರೆ.
“ಸೈಬರ್ ಕಿಲಾಡಿ ವೇಣು ಶೆಟ್ಟಿ ಜಾಲವೇ ಬೇರೆ!”
ಸೌಮ್ಯ ಅವರ ಮಾಜಿ ಪರಿಚಿತ ಎನ್ನಲಾದ ವೇಣು ಶೆಟ್ಟಿ ಮಾಡಿದ್ದ ಆರೋಪಗಳಿಗೆ ಉತ್ತರಿಸಿದ ಅವರು, “ವೇಣು ಶೆಟ್ಟಿ ಒಬ್ಬ ರಂಗಭೂಮಿ ಕಲಾವಿದನಷ್ಟೇ. ಆತ ನನಗೆ ಮದುವೆ ಪ್ರಸ್ತಾವನೆ ಇಟ್ಟಿದ್ದ, ಆದರೆ ಆತನ ನಡತೆ ಸರಿಯಿಲ್ಲದ ಕಾರಣ ನಾನು ತಿರಸ್ಕರಿಸಿದ್ದೆ. ಆತನೇ ಸುದೀಪ್ ಕುಟುಂಬದ ಮನಸ್ಸು ಕೆಡಿಸಿ ಇಷ್ಟೆಲ್ಲಾ ಗೊಂದಲ ಸೃಷ್ಟಿಸಿದ್ದಾನೆ. ಸುದೀಪ್ ತಂದೆಗೆ ಪದೇ ಪದೇ ಫೋನ್ ಮಾಡಿ ನಮ್ಮ ಸಂಸಾರದಲ್ಲಿ ವಿಷ ಹಾಕಿದ್ದಾನೆ,” ಎಂದು ಗಂಭೀರವಾಗಿ ಆರೋಪಿಸಿದರು.
ಮದುವೆಯ ಹೆಸರಲ್ಲಿ ಹಲವರಿಗೆ ಮೋಸ? ಸುದೀಪ್ ಪೋಷಕರ ಜೊತೆಗೂಡಿ ಸೌಮ್ಯ ವಿರುದ್ಧ ಮತ್ತೊಬ್ಬ ಯುವಕನಿಂದ ಗಂಭೀರ ಆರೋಪ

ನೆಲ್ಯಾಡಿಯಲ್ಲಿ ಹೈಡ್ರಾಮಾ ನಡೆದಿದ್ದು ನಿಜವೇ?
ನೆಲ್ಯಾಡಿಯಲ್ಲಿ ಗಲಾಟೆ ಮಾಡಿರುವ ಬಗ್ಗೆ ಅತ್ತೆ ಪುಷ್ಪಲತಾ ಮಾಡಿದ್ದ ಆರೋಪವನ್ನು ನಿರಾಕರಿಸಿದ ಸೌಮ್ಯ, “ಸುದೀಪ್ ಫೋನ್ ಸ್ವಿಚ್ ಆಫ್ ಇದ್ದಿದ್ದರಿಂದ ನಾನು ಅಲ್ಲಿಗೆ ಹೋಗಿದ್ದು ನಿಜ. ಅಲ್ಲಿ ನನ್ನನ್ನು ಕೆಟ್ಟ ಭಾಷೆಯಿಂದ ನಿಂದಿಸಿ, ಸುದೀಪ್‌ಗೆ ನನ್ನನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದರು. ಒಬ್ಬ ಪತ್ನಿಯಾಗಿ ನಾನು ನೋವಿನಿಂದ ಧ್ವನಿ ಎತ್ತಿದ್ದೇನೆ ಹೊರತು ಗಲಾಟೆ ಮಾಡಿಲ್ಲ. ಬೇಕಿದ್ದರೆ ಸಿಸಿಟಿವಿ ಚೆಕ್ ಮಾಡಿ,” ಎಂದು ಸವಾಲು ಹಾಕಿದ್ದಾರೆ.

“ಮನೆಯವರ ಕಾಟಕ್ಕೆ ಸುದೀಪ್ ಬಲಿ”
ಸುದೀಪ್ ಅವರ ಮೇಲೆ ಕಳೆದ 8-9 ವರ್ಷಗಳಿಂದ ಸಾಲದ ಸುಳಿ ಇತ್ತು. ಆದರೆ ಅವರು ಪೋಷಕರ ಮನೆಗೆ ಹೋದ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿತ್ತು. “ಅವರ ಮನೆಯಲ್ಲಿ ಏನೋ ನಡೆದಿದೆ, ಅದರಿಂದಲೇ ಸುದೀಪ್ ಈ ನಿರ್ಧಾರ ತಳೆದಿದ್ದಾರೆ. ಅವರ ಮನೆಯವರೇ ಆತನನ್ನು ಪ್ರಚೋದಿಸಿರಬಹುದು,” ಎಂದು ಸೌಮ್ಯ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸುದೀಪ್ ಕುಟುಂಬಸ್ಥರು ಹಾಗೂ ವೇಣು ಶೆಟ್ಟಿ ವಿರುದ್ಧ ಸೌಮ್ಯ ದೂರು ದಾಖಲಿಸಿದ್ದಾರೆ.