ಮಂಗಳೂರು: ಮದುವೆಯಾದ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಉದ್ಯಮಿ ಸುದೀಪ್ ರೈ ನೆಲ್ಯಾಡಿ (31) ಅವರು ನಿಗೂಢವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಇದು ಆತ್ಮಹತ್ಯೆಯಲ್ಲ, ಬದಲಾಗಿ ಪತ್ನಿಯೇ ಎಸಗಿದ ವ್ಯವಸ್ಥಿತ ಕೊಲೆ ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸುದೀಪ್ ಅವರ ತಂದೆ ಬಿ. ದಾಮೋದರ ನೆಲ್ಯಾಡಿ ಮತ್ತು ತಾಯಿ ಪುಷ್ಪಲತಾ ತಮ್ಮ ಮಗನಿಗೆ ನ್ಯಾಯ ಒದಗಿಸಬೇಕು, ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.



ರಹಸ್ಯ ಮದುವೆ ಮತ್ತು ಕಿರುಕುಳದ ಆರಂಭ
ಪುತ್ರ ಸುದೀಪ್ ರೈ ಕಾರ್ಕಳ ತಾಲೂಕಿನ ಬಂಗ್ಲಗುಡ್ಡೆ ಕಜೆಯ ಸೌಮ್ಯ ಶೆಟ್ಟಿ ಎಂಬಾಕೆಯನ್ನು ಫೆಬ್ರವರಿ 17, 2026 ರಂದು ಪುತ್ತೂರಿನಲ್ಲಿ ನೋಂದಣಿ ವಿವಾಹವಾಗಿದ್ದ. ಮದುವೆಯ ನಂತರ ಕಾರ್ಕಳದಲ್ಲಿರುವ ಸೌಮ್ಯಳ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಈ ಮದುವೆಯ ವಿಚಾರ ನಮಗೆ ತಡವಾಗಿ ತಿಳಿದುಬಂದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಸುದೀಪ್‌ಗೆ ಪತ್ನಿಯಿಂದ ಮಾನಸಿಕ ಹಿಂಸೆ ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳು ಆರಂಭವಾಗಿದ್ದವು ಎಂದು ತಂದೆ ಆರೋಪಿಸಿದ್ದಾರೆ.

ಮಾರ್ಚ್ 17ರಂದು ಸುದೀಪ್ ತನ್ನ ತಾಯಿಯೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳಲು ನೆಲ್ಯಾಡಿ ಪೇಟೆಗೆ ಬಂದಾಗ, ಸೌಮ್ಯ ಶೆಟ್ಟಿ ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆಯಲ್ಲೇ ಸುದೀಪ್ ಕಾರನ್ನು ಅಡ್ಡಗಟ್ಟಿದ್ದಾಳೆ. ಸಾರ್ವಜನಿಕರ ಸಮ್ಮುಖದಲ್ಲೇ ಸುದೀಪ್ ಮತ್ತು ಆತನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿಮ್ಮನ್ನು ಕೊಂದು ಹಾಕುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಳು. ಈ ಘಟನೆಯ ನಂತರ ಸುದೀಪ್ ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕಾರ್ಕಳದ ಕಡೆಗೆ ತೆರಳಿದ್ದರು. ಅಂದಿನಿಂದ ಆಕೆ ಆತನಿಗೆ ಅತಿಯಾದ ಮಾನಸಿಕ ಕಿರುಕುಳ ನೀಡಿದ್ದಾಳೆ ಎಂದಿದ್ದಾರೆ.

ಮಾರ್ಚ್ 22ರಂದು ಸುದೀಪ್‌ಗೆ ಅನಾರೋಗ್ಯವಾಗಿದೆ ಎಂದು ಸೌಮ್ಯಳ ಕುಟುಂಬದವರು ಕಾರ್ಕಳದ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ಪೋಷಕರು ಅಲ್ಲಿಗೆ ಧಾವಿಸಿದಾಗ ಸುದೀಪ್ ಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಸೌಮ್ಯ ನೀಡಿದ ಹೇಳಿಕೆಗಳು ಸಂಶಯಾಸ್ಪದವಾಗಿವೆ. ಮಾ. 16: ಫುಡ್ ಪಾಯಿಸನ್ ಆಗಿದೆ ಎಂದಿದ್ದಳು. ಮಾ. 19ಕ್ಕೆ ವಿಷ ಸೇವಿಸಿದ್ದಾನೆ ಎಂದು ಮಾತು ಬದಲಿಸಿದ್ದಳು. ಆದರೆ ಮಾ. 21ಕ್ಕೆ ಡೆಂಗ್ಯೂ ಜ್ವರ ಬಂದಿದೆ ಎಂದು ಕಥೆ ಕಟ್ಟಿದ್ದಳು. ಸುದೀಪ್ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಸೌಮ್ಯ ಮತ್ತು ಆಕೆಯ ಕುಟುಂಬದವರು ಆಸ್ಪತ್ರೆಯಿಂದ ಪರಾರಿಯಾಗಿದ್ದರು. ತದನಂತರ ನಾನೇ ಒಬ್ಬ ತಂದೆಯಾಗಿ ಸುದೀಪ್‌ನನ್ನು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮಾರ್ಚ್ 29ರಂದು ಸುದೀಪ್ ಕೊನೆಯುಸಿರೆಳೆದಿದ್ದಾನೆ ಎಂದರು.

ವೈದ್ಯರ ತಪಾಸಣೆಯ ವೇಳೆ ಸುದೀಪ್ ದೇಹದಲ್ಲಿ ʻರ್ಯಾಟೋಲ್’ (ಇಲಿ ಪಾಷಾಣ) ವಿಷ ಪತ್ತೆಯಾಗಿದೆ. “ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ. ಅವನ ವೀಕ್‌ನೆಸ್‌ಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು. ಆತನಿಗೆ ಸೌಮ್ಯ ಮತ್ತು ಕುಟುಂಬದವರೇ ಆಹಾರದಲ್ಲಿ ವಿಷ ಬೆರೆಸಿ ನೀಡಿದ್ದಾರೆ” ಎಂದು ದಾಮೋದರ ನೆಲ್ಯಾಡಿ ನೇರವಾಗಿ ಆರೋಪಿಸಿದ್ದಾರೆ.
ಹನಿಟ್ರ್ಯಾಪ್ ಜಾಲದ ಶಂಕೆ
ಸೌಮ್ಯ ಶೆಟ್ಟಿಯ ಹಿನ್ನೆಲೆ ಸಂಶಯಾಸ್ಪದವಾಗಿದ್ದು, ಆಕೆಗೆ ಈ ಹಿಂದೆ ವಿವಾಹವಾಗಿ ವಿಚ್ಛೇದನವಾಗಿತ್ತು. ಆಕೆ ಈಗಾಗಲೇ ಹಲವು ಯುವಕರ ಬಾಳಿನಲ್ಲಿ ಆಟವಾಡಿದ್ದು, ಇದೊಂದು ದೊಡ್ಡ ಹನಿಟ್ರ್ಯಾಪ್ ಜಾಲವಿರಬಹುದು. ಸುದೀಪ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾಗ ಆತನ ಮೊಬೈಲ್ ಮೂಲಕ ಬೇರೆ ಹುಡುಗಿಯರಿಗೆ ಮೆಸೇಜ್ ಕಳುಹಿಸಿ ಆತನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನೂ ಆಕೆ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದರೂ, ಪ್ರಕರಣದ ಗಂಭೀರತೆ ಮತ್ತು ಹನಿಟ್ರ್ಯಾಪ್ ಜಾಲದ ಆಳವನ್ನು ಪತ್ತೆಹಚ್ಚಲು ಪ್ರಕರಣವನ್ನು ಸಿಬಿಐ (CBI) ಅಥವಾ ಎನ್ಐಎ (NIA) ಗೆ ಒಪ್ಪಿಸಬೇಕು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇನ್ನಷ್ಟು ಸತ್ಯಾಂಶಗಳು ಹೊರಬರಬೇಕಿದೆ. ನಮ್ಮ ಮಗನಿಗೆ ಆದ ಸ್ಥಿತಿ ಇನ್ನೊಬ್ಬ ಯುವಕನಿಗೆ ಬರಬಾರದು. ಆಕೆಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಸುದೀಪ್ ಪೋಷಕರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.