ತಿರುವನಂತಪುರಂ: “ಗಡಿಯಲ್ಲಿ ಸಣ್ಣ ತಪ್ಪು ಮಾಡಿದರೂ ಪಾಕಿಸ್ತಾನ ಈ ಬಾರಿ ಊಹಿಸಲೂ ಸಾಧ್ಯವಾಗದ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ!” ಹೀಗೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ. 2025ರ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ನಡೆಸಿದ ʻಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಅಸಲಿ ತಾಕತ್ತನ್ನು ಅವರು ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ.

ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಹೇಡಿ ಉಗ್ರರ ದಾಳಿಗೆ ಭಾರತ ನೀಡಿದ ಪ್ರತ್ಯುತ್ತರ ಎಂತಹುದು ಎನ್ನುವುದನ್ನು ವಿವರಿಸಿದ ಸಚಿವರು, “ಆಪರೇಷನ್ ಸಿಂಧೂರ್ ವೇಳೆ ನಮ್ಮ ಸೈನಿಕರು ಕೇವಲ 22 ನಿಮಿಷಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದ್ದರು. ಇದು ಭಾರತೀಯ ಸೇನಾ ಇತಿಹಾಸದಲ್ಲೇ ಭಯೋತ್ಪಾದನೆ ವಿರುದ್ಧ ನಡೆದ ಅತಿದೊಡ್ಡ ಮತ್ತು ಅತ್ಯಂತ ಧೈರ್ಯದ ಕಾರ್ಯಾಚರಣೆ,” ಎಂದು ಹೆಮ್ಮೆಯಿಂದ ನುಡಿದರು.

ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವ ಮತ್ತೊಂದು ಮಾತು ಆಡದ ರಾಜನಾಥ್ ಸಿಂಗ್, “ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಇನ್ನೂ ಮುಕ್ತಾಯಗೊಂಡಿಲ್ಲ. ಗಡಿಯ ಆಚೆಯಿಂದ ಯಾವುದೇ ಕಿಡಿಗೇಡಿತನ ನಡೆದರೆ, ಕೇವಲ ತಕ್ಕ ಪ್ರತ್ಯುತ್ತರವಷ್ಟೇ ಅಲ್ಲ, ಹಿಂದೆಂದೂ ಕಂಡಿರದ ನಿರ್ಣಾಯಕ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು. 2016ರ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ಮಾದರಿಯಲ್ಲೇ ಈಗಿನ ಸರ್ಕಾರ ಉಗ್ರರ ಬೆನ್ನೆಲುಬು ಮುರಿದಿದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರರ ದಾಳಿ ನಡೆದಾಗ ಸರ್ಕಾರ ಕೇವಲ ‘ದಾಖಲೆಗಳ ಕಡತ’ (Dossiers) ಕಳುಹಿಸಿ ಸುಮ್ಮನಾಗುತ್ತಿತ್ತು. ಆದರೆ ಈಗಿನ ಮೋದಿ ಸರ್ಕಾರ ಉಗ್ರರ ಮನೆಗೇ ನುಗ್ಗಿ ಹೊಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ಟೀಕಿಸಿದರು. ಅಂದು ಬಾಂಬ್ ಬ್ಲಾಸ್ಟ್ ಸುದ್ದಿಗಳು ನಿತ್ಯವೂ ಕೇಳಿಬರುತ್ತಿದ್ದವು, ಇಂದು ಭಾರತೀಯ ಸೇನೆ ತನ್ನ ಪರಾಕ್ರಮದ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕಿದೆ ಎಂದು ಅವರು ತಿಳಿಸಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟು: ಭಾರತೀಯರ ರಕ್ಷಣೆಗೆ ಸಿದ್ಧತೆ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮಾತನಾಡಿದ ಸಚಿವರು, “ಅಲ್ಲಿನ ಪರಿಸ್ಥಿತಿ ಸಾಮಾನ್ಯವಾದುದಲ್ಲ. ಕೇರಳದ ಬಹಳಷ್ಟು ಮಂದಿ ಅಲ್ಲಿ ವಾಸಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಪ್ರತಿಯೊಬ್ಬ ಭಾರತೀಯನ ಹಿತರಕ್ಷಣೆಗೆ ಸಜ್ಜಾಗಿದ್ದಾರೆ. ಭಾರತೀಯ ನೌಕಾಪಡೆಯು ಜನರನ್ನು ಸ್ಥಳಾಂತರಿಸಲು ಸಕ್ರಿಯವಾಗಿದೆ. ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆ ಇಲ್ಲ, ಯಾರೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ,” ಎಂದು ಭರವಸೆ ನೀಡಿದರು.