ಮದುವೆಯ ಹೆಸರಲ್ಲಿ ಹಲವರಿಗೆ ಮೋಸ? ಸುದೀಪ್ ಪೋಷಕರ ಜೊತೆಗೂಡಿ ಸೌಮ್ಯ ವಿರುದ್ಧ ಮತ್ತೊಬ್ಬ ಯುವಕನಿಂದ ಗಂಭೀರ ಆರೋಪ

ಮಂಗಳೂರು: ಮದುವೆಯಾದ ಒಂದೇ ತಿಂಗಳಿಗೆ ಉದ್ಯಮಿ ಸುದೀಪ್ ರೈ ನೆಲ್ಯಾಡಿ ಸಾವನ್ನಪ್ಪಿದ ಪ್ರಕರಣದಲ್ಲಿ ಈತನ ಪತ್ನಿ ಸೌಮ್ಯ ಶೆಟ್ಟಿ ಮೇಲೆ ಮೃತನ ಪೋಷಕರು ಗಂಭೀರ ಆರೋಪ ಮಾಡುತ್ತಿರುವ ಬೆನ್ನಲ್ಲೇ ತಾನೂ ಕೂಡ ಅದೇ ಯುವತಿಯಿಂದಾಗಿ ಮೋಸ ಹೋಗಿದ್ದಾಗಿ ಯುವಕನೋರ್ವ ಮುಂದೆ ಬಂದಿದ್ದಾನೆ.

ಸುದೀಪ್ ಪೋಷಕರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಲ್ಕಿಯ ವೇಣುಗೋಪಾಲ ಶೆಟ್ಟಿ(ವೇಣು) ಎಂಬ ಯುವಕ ಪಾಲ್ಗೊಂಡು, ಸೌಮ್ಯ ಶೆಟ್ಟಿ ವಿರುದ್ಧ ಹಲವಾರು ಗಂಭೀರ ಆರೋಪ ಮಾಡಿದ್ದಾನೆ.

“ಸೌಮ್ಯ ಶೆಟ್ಟಿ 2024ರ ಜೂನ್‌ನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಮದುವೆಯ ಪ್ರಪೋಸಲ್ ಇಟ್ಟಳು. ಆಕೆಗೆ ಈ ಹಿಂದೆ ಮದುವೆಯಾಗಿ ಡಿವೋರ್ಸ್ ಆಗಿದೆ ಎಂದು ತಿಳಿದಿದ್ದರೂ, ಆಕೆಯ ಜೀವನ ಸರಿಹೋಗಲಿ ಎಂದು ನಾನು ಒಪ್ಪಿ ಮನೆಯವರನ್ನು ಒಪ್ಪಿಸಿದೆ. ಮದುವೆಗೆ ದಿನಾಂಕ ನಿಗದಿಯಾಗಿ, ಹಾಲ್, ಕ್ಯಾಟರಿಂಗ್ ಮತ್ತು ಫೋಟೋಗ್ರಾಫರ್ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿದ್ಧತೆ ನಡೆಸಿದ್ದೆವು” ಎಂದು ವೇಣು ಶೆಟ್ಟಿ ವಿವರಿಸಿದರು.

“ಮದುವೆವರೆಗೂ ಫೋಟೋ ಹಾಕಬೇಡ ಎಂದಿದ್ದ ಆಕೆ, ಡೇಟ್ ಫಿಕ್ಸ್ ಆದ ಮೇಲೆ ಒಪ್ಪಿದಳು. ನಾನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ ನನಗೆ ಹತ್ತಾರು ಕರೆಗಳು ಬಂದವು. ಸಿನಿಮಾ ರಂಗದ ಪರಿಚಯದ ಹುಡುಗಿಯೊಬ್ಬರು ಕರೆ ಮಾಡಿ, ʻಈಕೆಗೆ ಈಗಾಗಲೇ ಇಬ್ಬರ ಜೊತೆ ಮದುವೆಯಾಗಿದೆ, ನಿನ್ನ ಲೈಫ್ ಹಾಳು ಮಾಡಿಕೊಳ್ಳಬೇಡ’ ಎಂದು ಎಚ್ಚರಿಸಿದರು. ಮೊದಲು ನಾನು ಆಕೆಯನ್ನು ನಂಬಿ ಕರೆ ಮಾಡಿದವರ ಜೊತೆ ಜಗಳವಾಡಿದ್ದೆ. ಆದರೆ ಸತ್ಯ ತಿಳಿಯುತ್ತಿದ್ದಂತೆ ಅವಳ ಮನೆಗೆ ಹೋಗಿ ಮದುವೆ ಕ್ಯಾನ್ಸಲ್ ಮಾಡಿದೆ” ಎಂದರು.

“ಡಿವೋರ್ಸ್ ಕೇಸ್‌ಗೆ ಸಹಾಯ ಮಾಡಿದ ಸಂಜಯ್ ಎಂಬಾತನನ್ನು ಈಕೆ ಮದುವೆಯಾಗಿ ಒಂದೂವರೆ ವರ್ಷ ಜೊತೆಗಿದ್ದಳು. ನನಗೆ ಆತ ಕೇವಲ ಫ್ರೆಂಡ್ ಎಂದು ಸುಳ್ಳು ಹೇಳಿದ್ದಳು. ಮದುವೆ ಕ್ಯಾನ್ಸಲ್ ಆದಾಗ ಆಕೆ ತನ್ನ ಅಪ್ಪನಿಗೆ ಕಾಲ್ ಮಾಡಿ ನಾಟಕವಾಡಿದಳು. ಆಗ ನನ್ನ ತಂದೆ ಕೂಡ ನನ್ನನ್ನು ಕರೆದು, ʻಅವಳನ್ನು ಬಿಡಬೇಡ, ಮನೆಗೆ ಕರ್ಕೊಂಡು ಬಾ’ ಎಂದರು. ಅವರ ಮಾತಿಗೆ ಗೌರವ ಕೊಟ್ಟು ನಾನು ಆಕೆಯನ್ನು ಮದುವೆಯಾಗದೆ ಮನೆಗೆ ತರುವುದು ಬೇಡವೆಂದು ಕಾರ್ಕಳದ ಅಕ್ಕನ ಮನೆಗೆ ಕರೆದುಕೊಂಡು ಹೋದೆ” ಎಂದು ಆ ದಿನಗಳನ್ನು ನೆನಪಿಸಿಕೊಂಡರು.

ಕಾರ್ಕಳದ ಅಕ್ಕನ ಮನೆಯಲ್ಲಿದ್ದಾಗ ನಿತ್ಯ ಜಗಳ ಮಾಡುತ್ತಿದ್ದಳು. ನನ್ನ ತಾಯಿ ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗಲೂ ಅಲ್ಲಿಗೆ ಬಂದು ಗಲಾಟೆ ಮಾಡಿದ್ದಾಳೆ. ʻನಿನಗೆ ಫ್ಯಾಮಿಲಿ ಇಂಪಾರ್ಟೆಂಟ್, ನನ್ನನ್ನು ದೂರ ಮಾಡಿದೆ’ ಎಂದು ಕಿರುಚಾಡಿ ಸೀನ್ ಕ್ರಿಯೇಟ್ ಮಾಡಿದಾಗ ಆಕೆಗೆ ಹೊಡೆದಿದ್ದೆ. ಅಂದು ಗಲಾಟೆ ಮಿತಿಮೀರಿದಾಗ ಪೊಲೀಸರು ಬಂದಿದ್ದರು. ಆಗ ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರು, ‘ಇವಳ ಮೇಲೆ ಈಗಾಗಲೇ ದೂರುಗಳಿವೆ, ಇವಳಿಂದ ದೂರ ಇರು’ ಎಂದಿದ್ದರು.

“ಆಕೆಯ ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳ ತಾಳಲಾರದೆ ನಾನು ಪರಿಚಯದ ವಕೀಲರೊಬ್ಬರಲ್ಲಿ ಸಲಹೆ ಕೇಳಿದೆ. ಸೌಮ್ಯಳ ಹಿನ್ನೆಲೆ ತಿಳಿದಿದ್ದ ಆ ವಕೀಲರು, ಅಕ್ಕನ ಮೂಲಕ ಆಕೆಯ ಮೇಲೆ ಕಂಪ್ಲೇಂಟ್ ಕೊಡಿಸಿ ನೀನು ಸದ್ಯಕ್ಕೆ ಇಲ್ಲಿಂದ ಎಸ್ಕೇಪ್ ಆಗು’ ಎಂದು ಹೇಳಿದರು. ಅವರ ಮಾರ್ಗದರ್ಶನದಂತೆ ನಾನು ಒಂದೂವರೆ ತಿಂಗಳು ಮುಂಬೈನಲ್ಲಿ ಅಡಗಿಕೊಳ್ಳಬೇಕಾಯಿತು. ಆಕೆಯ ಬಲೆಯಿಂದ ತಪ್ಪಿಸಿಕೊಳ್ಳಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ” ಎಂದು ವೇಣು ಶೆಟ್ಟಿ ಹತಾಶೆ ವ್ಯಕ್ತಪಡಿಸಿದರು.

ಈಗ ಸುದೀಪ್ ಎಂಬ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಈಕೆಯ ಬಲೆಗೆ ಬಿದ್ದು ಎಷ್ಟು ಮಂದಿ ಮೋಸ ಹೋಗಿದ್ದಾರೋ ಗೊತ್ತಿಲ್ಲ. ನಿಮ್ಮ ವೀಕ್‌ನೆಸ್‌ಗಳನ್ನು ಇಟ್ಟುಕೊಂಡು ಬೆದರಿಸುವುದು ಈಕೆಯ ಚಾಳಿ. ಈಗ ಸುದೀಪ್ ಅಮ್ಮ ಕಣ್ಣೀರು ಹಾಕುವಂತಾಗಿದೆ. ಈಕೆಯಿಂದ ಮೋಸ ಹೋದವರು ಈಗಲಾದರೂ ಧೈರ್ಯವಾಗಿ ಮುಂದೆ ಬನ್ನಿ. ಸುದೀಪ್ ಸಾವಿಗೆ ನ್ಯಾಯ ಸಿಗಬೇಕು ಮತ್ತು ಈಕೆಯ ಹನಿಟ್ರ್ಯಾಪ್ ಜಾಲ ಬಯಲಾಗಬೇಕು” ಎಂದು ವೇಣುಗೋಪಾಲ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
.

error: Content is protected !!