ಕೇಪ್ ಕೆನವೆರಲ್ (ಫ್ಲೋರಿಡಾ): ಹಲವು ತಿಂಗಳುಗಳಿಂದ ಕಾಡುತ್ತಿದ್ದ ತಾಂತ್ರಿಕ ಅಡೆತಡೆಗಳು, ಹೈಡ್ರೋಜನ್ ಸೋರಿಕೆ ಮತ್ತು ಹೀಲಿಯಂ ಸಮಸ್ಯೆಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಏಪ್ರಿಲ್ ಫೂಲ್ಸ್ ದಿನದಂದು ಇಡೀ ಜಗತ್ತೇ ಬೆರಗಾಗುವಂತೆ ನಾಸಾದ ಬೃಹತ್ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮತ್ತು ಒರಿಯನ್ ಕ್ಯಾಪ್ಸುಲ್ ಫ್ಲೋರಿಡಾದ ಬಾಹ್ಯಾಕಾಶ ತಟದಿಂದ ಗಗನಕ್ಕೆ ಹಾರಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಾಂತರ ಜನ ಕಡಲತೀರದಲ್ಲಿ ಜಮಾಯಿಸಿದ್ದರು.

ಈ ಮಿಷನ್‌ನಲ್ಲಿರುವ ನಾಲ್ವರು ಗಗನಯಾತ್ರಿಗಳು ಮುಂದಿನ 10 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಲಿದ್ದಾರೆ. ಇದು ಮಾನವ ಇತಿಹಾಸದಲ್ಲೇ ಅತಿ ವೇಗದ ಮತ್ತು ಅತಿ ದೂರದ (ಚಂದಿರನ ಹಿಂಭಾಗದವರೆಗೆ) ಪ್ರಯಾಣ ಎನಿಸಿಕೊಳ್ಳಲಿದೆ. ಇದು ಕೇವಲ ಒಂದು ಪ್ರಯಾಣವಲ್ಲ, ಬದಲಿಗೆ 2028ರಲ್ಲಿ ಚಂದಿರನ ಮೇಲೆ ಮಾನವನನ್ನು ಇಳಿಸುವ ನಾಸಾದ ಮಹತ್ವಾಕಾಂಕ್ಷಿ ಯೋಜನೆಗೆ ಬಲವಾದ ಮುನ್ನುಡಿ.
ದಾಖಲೆ ಬರೆದ ನಾಲ್ವರು ಹೀರೋಗಳು:
ಈ ಬಾರಿಯ ಆರ್ಟೆಮಿಸ್-2 ಹಲವು ಮೊದಲುಗಳಿಗೆ ಸಾಕ್ಷಿಯಾಗುತ್ತಿದೆ
ಕ್ರಿಸ್ಟಿನಾ ಕೋಚ್: ಚಂದಿರನ ಪರಿಸರಕ್ಕೆ ಭೇಟಿ ನೀಡುತ್ತಿರುವ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.
ವಿಕ್ಟರ್ ಗ್ಲೋವರ್: ಚಂದಿರನ ಅಂಗಳಕ್ಕೆ ಸಾಗುತ್ತಿರುವ ಮೊದಲ ಕಪ್ಪು ವರ್ಣೀಯ ಗಗನಯಾತ್ರಿ.
ಜೆರೆಮಿ ಹ್ಯಾನ್ಸೆನ್: ಅಮೆರಿಕನ್ನರಲ್ಲದ (ಕೆನಡಾ ಮೂಲದ) ಮೊದಲ ವ್ಯಕ್ತಿಯಾಗಿ ಚಂದಿರನತ್ತ ಪಯಣ ಬೆಳೆಸಿದ್ದಾರೆ.
ರೀಡ್ ವೈಸ್‌ಮನ್: 50ನೇ ವಯಸ್ಸಿನಲ್ಲಿ ಚಂದಿರನತ್ತ ಸಾಗುತ್ತಿರುವ ಹಿರಿಯ ಗಗನಯಾತ್ರಿ ಎಂಬ ದಾಖಲೆ ಇವರ ಹೆಸರಿಗೆ ಸೇರಲಿದೆ.
ಉಡಾವಣೆಯ ಸಮಯದಲ್ಲಿ ರಾಕೆಟ್ ದಿಕ್ಕು ತಪ್ಪಿದರೆ ಅದನ್ನು ನಾಶಪಡಿಸುವ ‘ಫ್ಲೈಟ್ ಟರ್ಮಿನೇಷನ್ ಸಿಸ್ಟಮ್’ (FTS) ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆಗ ಇಂಜಿನಿಯರ್‌ಗಳು ಹಳೆಯ ‘ಸ್ಪೇಸ್ ಶಟಲ್’ ಕಾಲದ ಯಂತ್ರವೊಂದನ್ನು ಬಳಸಿ ಈ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದರು. ಮಳೆ ಮತ್ತು ಮೋಡದ ಕವಿದ ವಾತಾವರಣವಿದ್ದರೂ, ಉಡಾವಣೆಗೆ ಯಾವುದೇ ಅಡ್ಡಿಯಾಗಲಿಲ್ಲ.
ರಾಕೆಟ್ ಹಾರುವ ಮುನ್ನ ಸುಮಾರು 7 ಲಕ್ಷ ಗ್ಯಾಲನ್ ಅತಿ ಶೀತಲ ದ್ರವ ಆಮ್ಲಜನಕ ಮತ್ತು ಹೈಡ್ರೋಜನ್ ಅನ್ನು ತುಂಬುವುದು ಒಂದು ಅಗ್ನಿಪರೀಕ್ಷೆಯಾಗಿತ್ತು. ಆದರೆ ಈ ಬಾರಿ ಯಾವುದೇ ಸೋರಿಕೆ ಇಲ್ಲದೆ ಕೌಂಟ್‌ಡೌನ್ ಸುಸೂತ್ರವಾಗಿ ಸಾಗಿತು. ಈಗ ಇಡೀ ಜಗತ್ತು ಈ ನಾಲ್ವರು ಸಾಹಸಿಗಳ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿದೆ!