
ಮೂಲ್ಕಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಬ್ಯಾಂಕ್ “ದೀಪಾವಳಿ ಸಂಭ್ರಮ” ಕಾರ್ಯಕ್ರಮ ಮಂಗಳವಾರ ಸಂಜೆ ಹಳೆಯಂಗಡಿ ಬಳಿಯ ಬೆರ್ನಾರ್ಡ್ ರಿವರ್ ವ್ಯೂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಮಾಜದ ಅಜ್ಞಾನದ ಕತ್ತಲೆ ಕಳೆದು ಬೆಳಕು ತುಂಬಲಿ. ಪ್ರಿಯದರ್ಶಿನಿ ಬ್ಯಾಂಕ್ ಇಂದು ಜನಪರವಾಗಿ ಮುನ್ನಡೆಯುತ್ತಿದೆ. ಇದರ ಸ್ಟಾಫ್ ಗಳು, ನಿರ್ದೇಶಕರು ಎಲ್ಲರೂ ಜನರ ಅವಶ್ಯಕತೆಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಬ್ಯಾಂಕ್ ನಲ್ಲಿ ಎಲ್ಲ ಜಾತಿ ಧರ್ಮದ ಜನರು ದುಡಿಯುತ್ತಿರುವ ಕಾರಣ ದೀಪಾವಳಿ ಹಬ್ಬ ಸಹಿತ ಎಲ್ಲ ಹಬ್ಬಗಳ ಆಚರಣೆ ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ“ ಎಂದರು.
ಪ್ರಾಸ್ತಾವಿಕ ಮಾತನ್ನಾಡಿದ ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ವಸಂತ ಬೆರ್ನಾರ್ಡ್ ಅವರು, “ಮೂರೂ ಧರ್ಮಗಳ ಹಬ್ಬಗಳನ್ನು ಆಚರಣೆ ಮಾಡಬೇಕು ಈ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಅಡಳಿತ ಮಂಡಳಿಯಲ್ಲಿ ಕೈಗೊಂಡ ತೀರ್ಮಾನದಂತೆ ಪ್ರಥಮವಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ನಾವೆಲ್ಲರೂ ಜಾತಿ ಮತ ಬೇಧ ಮರೆತು ಒಗ್ಗೂಡಿದಾಗ ಸಮಾಜ ಬಲಿಷ್ಠಗೊಳ್ಳುತ್ತದೆ”ಎಂದು ಹೇಳಿದರು.

ದೀಪಾವಳಿ ಸಂದೇಶ ನೀಡಿದ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೋರಿಯಾರ್ ಅವರು, “ಭಾರತದ ಹಬ್ಬಗಳು ಆಚರಣೆಗಳು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಚರ್ಚ್, ಮಸೀದಿ, ದೇವಸ್ಥಾನಗಳ ಜಾತ್ರೆಗಳಿಗೆ ಎಲ್ಲ ಧರ್ಮಗಳ ಜನರು ಪಾಲ್ಗೊಳ್ಳಬೇಕು ಹಾಗಾದಾಗ ಮಾತ್ರ ಸಾಮರಸ್ಯ ಬೆಳೆಯುತ್ತದೆ. ನಮ್ಮ ಧರ್ಮವನ್ನು ಅನುಕರಣೆ ಮಾಡಿ ಜೊತೆಗಿರುವವರ ಧರ್ಮವನ್ನು ಗೌರವಿಸುವುದು ನಿಜವಾದ ಸೌಹಾರ್ದತೆ“ ಎಂದರು.

ವೇದಿಕೆಯಲ್ಲಿ ಪಕ್ಷಿಕೆರೆ ಸಂತ ಜೂದರ ಚರ್ಚ್ ಧರ್ಮಗುರು ರೆ.ಫಾ.ಅನಿಲ್ ಡಿಸೋಜ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಬ್ಯಾಂಕ್ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಸನಿಲ್, ಬ್ಯಾಂಕ್ ಸಿಇಓ ಸುದರ್ಶನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.