ಬೆಂಗಳೂರಿನಲ್ಲಿ ಐಪಿಎಲ್ ನಕಲಿ ಟಿಕೆಟ್ ದಂಧೆ; ಪೊಲೀಸರ ಡಿಜಿಟಲ್ ಬ್ರೇಕ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ನಕಲಿ ಟಿಕೆಟ್ ಜಾಲಕ್ಕೆ ಕಡಿವಾಣ ಹಾಕಲು ಇದೀಗ ಪೊಲೀಸರು ಸಂಪೂರ್ಣವಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.

ಇತ್ತೀಚೆಗೆ ನಡೆದ ಆರ್‌ಸಿಬಿ(RCB) ಮತ್ತು ಎಸ್‌ಆರ್‌ಹೆಚ್‌(SRH) ಪಂದ್ಯದ ವೇಳೆ 1,500 ರೂ. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಸಲಿ ಟಿಕೆಟ್‌ ಹೋಲುವ ನಕಲಿ ಟಿಕೆಟ್‌ಗಳನ್ನು (Fake Ticket) ಸೃಷ್ಟಿಸಿ ಮಾರಾಟ ಮಾಡಿದ್ದರು.

ಪಂದ್ಯ ನೋಡಲು ಬಂದ ಅಭಿಮಾನಿಗಳು ಟಿಕೆಟ್ ಸ್ಕ್ಯಾನ್ ಮಾಡಿದಾಗ ಅವು ಕಾರ್ಯನಿರ್ವಹಿಸದಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಬೃಹತ್ ನಕಲಿ ಟಿಕೆಟ್ ಜಾಲ ಪತ್ತೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಏ.5 ರಂದು ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಎಕೆ ಪಂದ್ಯದ 1,500 ರೂ. ಮೌಲ್ಯದ ಟಿಕೆಟ್‌ಗಳನ್ನು ಸಹ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ವಿತರಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಪೊಲೀಸರು ಈ ಬಾರಿ ಐಪಿಎಲ್ ಟಿಕೆಟ್ ಜೊತೆಯಲ್ಲೇ ಮೆಟ್ರೋ ಟಿಕೆಟ್ ಸೇರಿಸುವ(Integrated Ticket) ವಿನೂತನ ಪ್ರಯತ್ನ ಮಾಡಿದ್ದರು. ಈ ಪ್ರಯೋಗಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಬೆಂಗಳೂರಿನ ಈ ಯಶಸ್ವಿ ಮಾದರಿಯನ್ನು ಗಮನಿಸಿರುವ ಮುಂಬೈ, ಚೆನ್ನೈ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಟ್ರೋ ಅಧಿಕಾರಿಗಳು ಈಗ ಬಿಎಂಆರ್‌ಸಿಎಲ್‌ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.

error: Content is protected !!