ಟ್ರಂಪ್‌ಗೆ ಇರಾನ್ ‌ಡೆತ್ ವಾರಂಟ್!: “ನಮ್ಮ ಶಕ್ತಿ ನಿಮಗೆ ಗೊತ್ತಿಲ್ಲ, ಅಮೆರಿಕಕ್ಕೆ ಶರಣಾಗತಿಯೇ ಗತಿ!”

ತೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಶಿಲಾಯುಗ”ದ ಹೇಳಿಕೆಗೆ ಇರಾನ್ ಸೇನೆ ಅಕ್ಷರಶಃ ಕೆಂಡ ಕಾರಿದೆ. “ನಮ್ಮನ್ನು ಮುಗಿಸುತ್ತೇವೆ ಎಂಬ ಅಹಂಕಾರ ಬೇಡ, ಅಮೆರಿಕಕ್ಕೆ ಕಾಯಂ ಅವಮಾನ ಮತ್ತು ಶರಣಾಗತಿ ಎದುರಾಗುವವರೆಗೂ ಈ ಯುದ್ಧದ ಜ್ವಾಲೆ ಆರುವುದಿಲ್ಲ” ಎಂದು ಇರಾನ್‌ನ ಅತ್ಯುನ್ನತ ಮಿಲಿಟರಿ ಕಮಾಂಡ್ ‘ಖಾತಮ್ ಅಲ್-ಅನ್ಬಿಯಾ’ ಗುಡುಗಿದೆ. ಅಮೆರಿಕದ ಗುಪ್ತಚರ ಇಲಾಖೆಯೇ ಬೆಚ್ಚಿಬೀಳುವಂತಹ ರಹಸ್ಯ ದಾಳಿಗಳ ಎಚ್ಚರಿಕೆಯನ್ನು ಇರಾನ್ ಈಗ ರವಾನಿಸಿದೆ.

“ನಿಮ್ಮ ಹತ್ತಿರವಿರುವ ನಮ್ಮ ಶಕ್ತಿಯ ಮಾಹಿತಿ ಕೇವಲ ಒಂದು ತುಣುಕಷ್ಟೇ. ನಮ್ಮ ಅಸಲಿ ಸಾಮರ್ಥ್ಯದ ಬಗ್ಗೆ ನಿಮಗೇನೂ ತಿಳಿದಿಲ್ಲ” ಎಂದು ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಅಮೆರಿಕಕ್ಕೆ ನೇರ ಸವಾಲು ಹಾಕಿದ್ದಾರೆ. ಟ್ರಂಪ್ ಅವರು ಅಮೆರಿಕದ ಜನತೆಗೆ ಇರಾನ್ ಶಕ್ತಿ ಕುಸಿದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಇರಾನ್‌ನ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ‘ಕಿಲರ್ ಡ್ರೋನ್’ಗಳು ಅಮೆರಿಕದ ಯಾವುದೇ ಕ್ಷಣದ ದಾಳಿಯನ್ನು ಎದುರಿಸಲು ಸಜ್ಜಾಗಿ ನಿಂತಿವೆ ಎಂಬುದು ಇರಾನ್‌ನ ವಾದ.

ಅಮೆರಿಕದ ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಉತ್ಪಾದನಾ ಕೇಂದ್ರಗಳು ಧ್ವಂಸವಾಗಿವೆ ಎಂಬ ಸುದ್ದಿಯನ್ನು ಇರಾನ್ ಸಂಪೂರ್ಣವಾಗಿ ತಳ್ಳಿಹಾಕಿದೆ. “ನೀವು ಹಾನಿ ಮಾಡಿರುವುದು ಕೇವಲ ಸಣ್ಣಪುಟ್ಟ ಕಟ್ಟಡಗಳಿಗೆ ಮಾತ್ರ. ನಮ್ಮ ಅಸಲಿ ಸಮರ ಸಿದ್ಧತೆಗಳು ಅಮೆರಿಕದ ಕಣ್ಣಿಗೆ ಬೀಳದ, ನೀವು ಊಹಿಸಲೂ ಸಾಧ್ಯವಿಲ್ಲದ ಅತ್ಯಂತ ರಹಸ್ಯ ಸ್ಥಳಗಳಲ್ಲಿ ನಡೆಯುತ್ತಿವೆ. ನಮ್ಮ ಕ್ಷಿಪಣಿಗಳನ್ನು ಎಣಿಸುವ ಸಾಹಸಕ್ಕೆ ಹೋಗಬೇಡಿ, ಯಾಕಂದರೆ ನಿಮ್ಮ ಲೆಕ್ಕಾಚಾರವೇ ತಲೆಕೆಳಗಾಗಲಿದೆ” ಎಂದು ಇರಾನ್ ಅಧಿಕಾರಿಗಳು ಅತಿವಿಶ್ವಾಸದಿಂದ ನುಡಿದಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈ ಯುದ್ಧವನ್ನು ಶುರು ಮಾಡಿ ದೊಡ್ಡ ತಪ್ಪು ಮಾಡಿವೆ, ಈಗ ಅದರ ಪರಿಣಾಮವನ್ನು ಅನುಭವಿಸಲೇಬೇಕು ಎಂದು ಇರಾನ್ ಎಚ್ಚರಿಸಿದೆ. “ಈ ಯುದ್ಧವು ನಿಮ್ಮನ್ನು ನೀವು ತೋಡಿಕೊಂಡಿರುವ ಹಳ್ಳಕ್ಕೆ ತಳ್ಳಲಿದೆ. ನಮ್ಮಿಂದ ಇನ್ನಷ್ಟು ಭೀಕರ ಮತ್ತು ವಿನಾಶಕಾರಿ ದಾಳಿಗಳನ್ನು ನಿರೀಕ್ಷಿಸಿ” ಎಂದು ಹೇಳುವ ಮೂಲಕ ಇರಾನ್ ತನ್ನ ಮುಂದಿನ ದಾಳಿಯ ಸೂಚನೆ ನೀಡಿದೆ. ಇರಾನ್‌ನ ಇಡೀ ಸೇನಾ ಪಡೆ ಮತ್ತು ರೆವಲ್ಯೂಷನರಿ ಗಾರ್ಡ್ಸ್ ಈಗ ಒಂದಾಗಿ ಅಮೆರಿಕದ ವಿರುದ್ಧ ‘ಸರಪಳಿ ದಾಳಿ’ಗೆ ಹೊಂಚು ಹಾಕುತ್ತಿವೆ.

error: Content is protected !!