ಇರಾನ್ ಕದನಕ್ಕೆ ಅಮೆರಿಕದ ʻಬುಷ್’ ಎಂಟ್ರಿ: 5,000 ಸೈನಿಕರು, 70 ಯುದ್ಧ ವಿಮಾನಗಳೊಂದಿಗೆ ಸಮರ ನೌಕೆ ರವಾನೆ!

ನವದೆಹಲಿ: ಇರಾನ್ ವಿರುದ್ಧದ ಯುದ್ಧ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ತನ್ನ ಬೃಹತ್ ನಿಮಿಟ್ಜ್-ಕ್ಲಾಸ್ ಸೂಪರ್ ಕ್ಯಾರಿಯರ್ ಜಾರ್ಜ್ ಹೆಚ್.ಡಬ್ಲ್ಯೂ ಬುಷ್ ಅನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಮಾರ್ಚ್ 31ರಂದು ವರ್ಜೀನಿಯಾದ ನೌಕಾ ನೆಲೆಯಿಂದ ಹೊರಟಿರುವ ಈ ಬೃಹತ್ ನೌಕೆ ಮುಂದಿನ 10 ರಿಂದ 14 ದಿನಗಳಲ್ಲಿ ಪರ್ಷಿಯನ್ ಕೊಲ್ಲಿ ತಲುಪುವ ನಿರೀಕ್ಷೆಯಿದೆ.

ಒಂದು ಲಕ್ಷ ಟನ್ ತೂಕದ ಈ ಬೃಹತ್ ನೌಕೆ ಕೇವಲ ಹಡಗಲ್ಲ, ಇದೊಂದು ತೇಲುವ ಸೈನ್ಯ! ಈ ನೌಕೆಯಲ್ಲಿ ಎಫ್-35ಸಿ ಸ್ಟೆಲ್ತ್ ಜೆಟ್ ಸೇರಿದಂತೆ 60 ರಿಂದ 70 ಅತ್ಯಾಧುನಿಕ ಯುದ್ಧ ವಿಮಾನಗಳಿವೆ. ಎಲೆಕ್ಟ್ರಾನಿಕ್ ವಾರ್‌ಫೇರ್ ನಡೆಸಬಲ್ಲ ‘ಗ್ರೋಲರ್ಸ್’ ವಿಮಾನಗಳೂ ಇದರಲ್ಲಿದೆ. 5,000ಕ್ಕೂ ಹೆಚ್ಚು ನೌಕಾ ಸಿಬ್ಬಂದಿ ಈ ನೌಕೆಯಲ್ಲಿದ್ದಾರೆ.

ಬುಷ್ ನೌಕೆಯ ರಕ್ಷಣೆಗಾಗಿ ಮೂರು ಬೃಹತ್ ಡಿಸ್ಟ್ರೋಯರ್ ಹಡಗುಗಳಿವೆ (USS Ross, USS Donald Cook, ಮತ್ತು USS Mason). ಇವುಗಳಲ್ಲಿ ಟೊಮಾಹಾಕ್ ಸೇರಿದಂತೆ 90ಕ್ಕೂ ಹೆಚ್ಚು ಕ್ಷಿಪಣಿಗಳಿವೆ.

ಟ್ರಂಪ್ ನೀಡಿದ್ದ ‘2-3 ವಾರಗಳ’ ಗಡುವು ವಿಸ್ತರಣೆ?
ಬುಧವಾರವಷ್ಟೇ ಭಾಷಣ ಮಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮುಂದಿನ ಎರಡು-ಮೂರು ವಾರಗಳಲ್ಲಿ ಇರಾನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತೇವೆ, ಯುದ್ಧ ಮುಗಿಯಲಿದೆ” ಎಂದಿದ್ದರು. ಆದರೆ, ಅಮೆರಿಕ ಈಗ ಹೊಸ ಯುದ್ಧನೌಕೆಯನ್ನು ಕಳುಹಿಸುತ್ತಿರುವುದು ನೋಡಿದರೆ, ಯುದ್ಧವು ಟ್ರಂಪ್ ಹೇಳಿದ ಅವಧಿಗಿಂತಲೂ ಹೆಚ್ಚು ಕಾಲ ಮುಂದುವರಿಯುವ ಸೂಚನೆ ನೀಡುತ್ತಿದೆ.

ಸದ್ಯ ಅಮೆರಿಕ ಬರಿ ಆಕಾಶ ಮಾರ್ಗದ ಮೂಲಕ ದಾಳಿ ನಡೆಸುತ್ತಿದೆ. ಆದರೆ ಬುಷ್ ನೌಕೆಯ ಆಗಮನವು ‘ನೆಲದ ಮೇಲಿನ ಯುದ್ಧ’ (Ground Invasion)ಕ್ಕೆ ಅಮೆರಿಕ ಸಿದ್ಧವಾಗುತ್ತಿದೆ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಈಗಾಗಲೇ ಅಮೆರಿಕ 57,000 ಸೈನಿಕರನ್ನು ಪಶ್ಚಿಮ ಏಷ್ಯಾಕ್ಕೆ ಕಳುಹಿಸಿದೆ. ಇರಾನ್‌ನ ತೈಲ ಸಂಗ್ರಹಾಗಾರಗಳಿರುವ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ಬಲವಂತವಾಗಿ ತೆರೆಯಲು ಅಮೆರಿಕ ಈ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ಅಮೆರಿಕದ ಅತ್ಯಂತ ದುಬಾರಿ ($13 ಬಿಲಿಯನ್) ಯುದ್ಧನೌಕೆ ʻಜೆರಾಲ್ಡ್ ಆರ್ ಫೋರ್ಡ್’ ಸದ್ಯ ಯುದ್ಧದಿಂದ ಹೊರಬಿದ್ದಿದೆ. ನೌಕೆಯ ಲಾಂಡ್ರಿ ರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಅದು ಹಾನಿಗೊಳಗಾಗಿದ್ದು, ಸದ್ಯ ಕ್ರೊಯೇಷಿಯಾದ ಬಂದರಿನಲ್ಲಿ ರಿಪೇರಿಗೆ ನಿಂತಿದೆ. ಆ ನೌಕೆಯ ಜಾಗವನ್ನು ತುಂಬಲು ಈಗ ಜಾರ್ಜ್ ಬುಷ್ ಧಾವಿಸುತ್ತಿದೆ.

ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಮಾರ್ಚ್ 24ರಂದು 2,000 ಪ್ಯಾರಾಟ್ರೂಪರ್‌ಗಳನ್ನು ಕಳುಹಿಸಿದ ಬೆನ್ನಲ್ಲೇ ಈಗ ಬೃಹತ್ ವಿಮಾನವಾಹಿ ನೌಕೆಯನ್ನು ರವಾನಿಸಿರುವುದು ಇರಾನ್ ಮೇಲೆ ಒತ್ತಡ ಹೆಚ್ಚಿಸಿದೆ. ವಿಶ್ವದ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿರುವ ಈ ಯುದ್ಧವು ಇರಾನ್‌ನ ಪರಮಾಣು ಮತ್ತು ತೈಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ. ಬುಷ್ ಯುದ್ಧನೌಕೆಯು 2014ರಲ್ಲಿ ಐಸಿಸ್ (ISIS) ವಿಧ್ವಂಸಕ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು, ಈಗ ಮತ್ತೆ ಅದೇ ಸಮುದ್ರದಲ್ಲಿ ಇರಾನ್ ಎದುರು ತೊಡೆತಟ್ಟಲು ಸಿದ್ಧವಾಗಿದೆ.

ಟ್ರಂಪ್ ಅವರ ಶೀಘ್ರ ಯುದ್ಧ ಅಂತ್ಯದ ಭರವಸೆಯ ನಡುವೆಯೂ ಬೃಹತ್ ಶಸ್ತ್ರಾಸ್ತ್ರಗಳ ನಿಯೋಜನೆ ನಡೆಯುತ್ತಿರುವುದು ಜಾಗತಿಕ ಸಮುದಾಯದಲ್ಲಿ ಆತಂಕ ಮೂಡಿಸಿದೆ.

error: Content is protected !!