ತೆಹ್ರಾನ್: ಇಡೀ ಜಗತ್ತು ಇಂದು ರಾತ್ರಿಯ ಭೀಕರತೆಗೆ ಸಾಕ್ಷಿಯಾಗಲಿದೆಯೇ? ಇರಾನ್‌ನ ಶಕ್ತಿಶಾಲಿ ಸೈನಿಕ ಪಡೆ ʻರೆವಲ್ಯೂಷನರಿ ಗಾರ್ಡ್ಸ್’ ನೀಡಿರುವ ಎಚ್ಚರಿಕೆಯ ಪ್ರಕಾರ, ಇಂದು (ಏಪ್ರಿಲ್ 1) ರಾತ್ರಿ ಸರಿಯಾಗಿ 8 ಗಂಟೆಗೆ (ತೆಹ್ರಾನ್ ಕಾಲಮಾನ) ಅಮೆರಿಕದ 18 ಪ್ರಮುಖ ತಂತ್ರಜ್ಞಾನ ಕಂಪೆನಿಗಳ ಮೇಲೆ ವಿನಾಶಕಾರಿ ದಾಳಿಗಳು ಆರಂಭವಾಗಲಿವೆ. ಈ ಘೋಷಣೆಯು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದು, ಯುದ್ಧದ ಕಿಚ್ಚು ಈಗ ಕೇವಲ ಗಡಿಗೆ ಸೀಮಿತವಾಗದೆ ಕಾರ್ಪೊರೇಟ್ ಕಚೇರಿಗಳ ಹೊಸ್ತಿಲಿಗೆ ಬಂದು ನಿಂತಿದೆ.

ಇರಾನ್ ಹೊರಡಿಸಿರುವ ಈ ‘ಡೆಡ್‌ಲೈನ್’ ಎಷ್ಟು ಗಂಭೀರವಾಗಿದೆಯೆಂದರೆ, ಆಪಲ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಟೆಸ್ಲಾದಂತಹ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತಕ್ಷಣವೇ ಕಚೇರಿ ಬಿಟ್ಟು ಹೊರಬರುವಂತೆ ಸೂಚಿಸಲಾಗಿದೆ. “ನಿಮ್ಮ ಪ್ರಾಣ ಉಳಿಸಿಕೊಳ್ಳಲು ತಕ್ಷಣವೇ ಕೆಲಸದ ಸ್ಥಳಗಳಿಂದ ದೂರ ಸರಿಯಿರಿ” ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ನೇರ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಈ ಕಂಪೆನಿಗಳ ಕಚೇರಿಗಳ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರಿಗೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆದೇಶಿಸಲಾಗಿದೆ.

ತನ್ನ ಪರಮೋಚ್ಚ ನಾಯಕ ಅಲಿ ಖಮೇನಿ ಮತ್ತು ಸೇನಾ ಮುಖ್ಯಸ್ಥ ಮೊಹಮ್ಮದ್ ಪಾಕ್‌ಪೋರ್ ಅವರ ಹತ್ಯೆಗೆ ಈ ಟೆಕ್ ಕಂಪೆನಿಗಳೇ ನೇರ ಕಾರಣ ಎಂದು ಇರಾನ್ ಕಿಡಿಕಾರಿದೆ. “ನಮ್ಮ ನಾಯಕರನ್ನು ಗುರಿಯಾಗಿಸಲು ಮತ್ತು ಅವರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಈ ಕಂಪೆನಿಗಳು ಅಮೆರಿಕ ಮತ್ತು ಇಸ್ರೇಲ್‌ಗೆ ತಂತ್ರಜ್ಞಾನದ ಬೆಂಬಲ ನೀಡಿವೆ” ಎಂದು ಆರೋಪಿಸಿರುವ ಇರಾನ್, ಪ್ರತಿಯೊಂದು ಹತ್ಯೆಗೂ ಪ್ರತಿಯಾಗಿ ಈ ಕಂಪೆನಿಗಳ ಘಟಕಗಳನ್ನು ಧ್ವಂಸಗೊಳಿಸುವುದಾಗಿ ಘೋಷಿಸಿದೆ.

ಜಾಗತಿಕ ಆರ್ಥಿಕತೆಯ ಮೇಲೆ ಕಾರ್ಮೋಡ:
ಇಂದು ರಾತ್ರಿ 8 ಗಂಟೆಯ ನಂತರ ಏನಾಗಲಿದೆ ಎಂಬ ಕುತೂಹಲ ಮತ್ತು ಆತಂಕ ಇಡೀ ವಿಶ್ವವನ್ನು ಆವರಿಸಿದೆ. ಒಂದು ವೇಳೆ ಈ ಟೆಕ್ ದೈತ್ಯರ ಮೇಲೆ ಭೌತಿಕ ದಾಳಿ ಅಥವಾ ಸೈಬರ್ ಯುದ್ಧ ನಡೆದರೆ, ಅದು ಜಾಗತಿಕ ಸಂವಹನ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದು. ಈಗಾಗಲೇ ಭಾರತದಲ್ಲಿ ಒರಾಕಲ್ ಸಂಸ್ಥೆಯ 12,000 ಉದ್ಯೋಗಿಗಳ ವಜಾ ಮತ್ತು ಪೆಟ್ರೋಲ್ ಬೆಲೆ 160 ರೂಪಾಯಿಗೆ ಏರಿಕೆಯಾಗಿರುವ ಬೆನ್ನಲ್ಲೇ, ಈ ಹೊಸ ಬೆದರಿಕೆ ಜನರ ನಿದ್ದೆಗೆಡಿಸಿದೆ.
