ನಾಳೆಯಿಂದ 7 ರಾಜ್ಯದಲ್ಲಿ ಜನಗಣತಿ ಪ್ರಕ್ರಿಯೆ ಶುರು!!

ನವದೆಹಲಿ: ದೇಶದ 16ನೇ ಜನಗಣತಿ ಪ್ರಕ್ರಿಯೆ ಏ.1ರಿಂದ ಆರಂಭವಾಗಲಿದೆ. ಮೊದಲ ಹಂತದ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಆರಂಭವಾಗಲಿದ್ದು, ಸಾರ್ವಜನಿಕರು ಆನ್‌ಲೈನ್ ಪೋರ್ಟಲ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಈ ಕುರಿತು ಸೋಮವಾರ(ಮಾ.30) ಮಾಹಿತಿ ನೀಡಿದ್ದು, ಅಂಡಮಾನ್-ನಿಕೋಬಾರ್‌ ದ್ವೀಪಗಳು,ದೆಹಲಿ, ಗೋವಾ, ಕರ್ನಾಟಕ, ಲಕ್ಷದ್ವೀಪ, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಏ.1ರಿಂದ 15ರವರೆಗೆ ಸ್ವಯಂ-ಗಣತಿ ಮತ್ತು ಏ.16 ರಿಂದ ಮೇ 15 ರವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿ ನಡೆಸಲಾಗುವುದು ಎಂದಿದ್ದಾರೆ.

ನಾಗರಿಕರು ನೀಡುವ ವೈಯಕ್ತಿಕ ಮಾಹಿತಿ ಸಂಪೂರ್ಣ ಗೌಪ್ಯವಾಗಿರುತ್ತದೆ. ಇದನ್ನು ಯಾವುದೇ ಕೋರ್ಟ್ ಸಾಕ್ಷ್ಯವಾಗಿ ಅಥವಾ ಸರ್ಕಾರಿ ಸವಲತ್ತುಗಳ ಮಾನದಂಡವಾಗಿ ಬಳಸುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದ್ದಾರೆ. ದತ್ತಾಂಶವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಹಂಚಿಕೊಳ್ಳುವುದಿಲ್ಲ. ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.

ಲಿವ್-ಇನ್ ಸಂಬಂಧದಲ್ಲಿರುವವರು ತಮ್ಮ ಬಂಧವನ್ನು ‘ಸ್ಥಿರ’ (ಶಾಶ್ವತ ಸಂಬಂಧ) ಎಂದು ಭಾವಿಸಿದರೆ, ಅವರನ್ನು ಗಣತಿಯಲ್ಲಿ ವಿವಾಹಿತ ದಂಪತಿ ಎಂದೇ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

error: Content is protected !!