ಬ್ಯಾಡ್ಮಿಂಟನ್ ರಾಣಿ ಕ್ಯಾರೊಲಿನಾ ಮರಿನ್ ನಿವೃತ್ತಿ: ಸಿಂಧುಗೆ ತಪ್ಪಿತು ʻಸಿಡಿಲಮರಿ’ಯ ಕಾಟ!

ಮ್ಯಾಡ್ರಿಡ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಪಾಲಿನ ಅತ್ಯಂತ ಕಠಿಣ ಎದುರಾಳಿ, ಒಲಿಂಪಿಕ್ ಚಿನ್ನದ ಪದಕ ವಿಜೇತೆ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸತತವಾಗಿ ಕಾಡುತ್ತಿರುವ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ 32 ವರ್ಷದ ಈ ಆಟಗಾರ್ತಿ ಅನಿವಾರ್ಯವಾಗಿ ಆಟಕ್ಕೆ ವಿದಾಯ ಹೇಳಿದ್ದಾರೆ.

ಗಾಯದ ಸಮಸ್ಯೆಗೆ ಶರಣಾದ ಚಾಂಪಿಯನ್:
ತಮ್ಮ ತವರು ಹುವೆಲ್ವಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿ ನಿವೃತ್ತಿ ಹೊಂದಬೇಕೆಂಬ ಕನಸು ಮರಿನ್ ಅವರಿಗಿತ್ತು. “ನನ್ನ ದೇಹವನ್ನು ಮತ್ತೆ ಅಪಾಯಕ್ಕೆ ಒಡ್ಡಲು ನನಗೆ ಇಷ್ಟವಿಲ್ಲ. 2024ರ ಪ್ಯಾರಿಸ್ ಒಲಿಂಪಿಕ್ಸ್ ಅಖಾಡದಲ್ಲೇ ನಾನು ನಿವೃತ್ತಿ ಹೊಂದಿದ್ದೆ, ಆದರೆ ಆಗ ಅದು ನಮಗೆ ತಿಳಿದಿರಲಿಲ್ಲ ಅಷ್ಟೆ,” ಎಂದು ಮರಿನ್ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ.

ಪಿ.ವಿ. ಸಿಂಧು ಜೊತೆಗಿನ ಆ ಅದ್ಭುತ ಜಿದ್ದಾಜಿದ್ದಿ:
ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಕ್ಯಾರೊಲಿನಾ ಮರಿನ್ ಮತ್ತು ಪಿ.ವಿ. ಸಿಂಧು ನಡುವಿನ ಪೈಪೋಟಿ ಎಂದಿಗೂ ಸ್ಮರಣೀಯ. 2016ರ ರಿಯೋ ಒಲಿಂಪಿಕ್ಸ್ ಫೈನಲ್‌ನಲ್ಲಿ ಸಿಂಧು ವಿರುದ್ಧ ಜಯಗಳಿಸಿ ಒಲಿಂಪಿಕ್ ಚಿನ್ನ ಗೆದ್ದ ಮೊದಲ ಏಷ್ಯನ್ ಅಲ್ಲದ ಮಹಿಳಾ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದರು. 2014, 2015 ಮತ್ತು 2018ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಮುಕುಟ ಧರಿಸಿದ್ದ ಇವರು, 2018ರ ಫೈನಲ್‌ನಲ್ಲಿ ಸಿಂಧು ಅವರನ್ನು 21-6, 21-11 ಅಂತರದಿಂದ ಸೋಲಿಸಿ ತಮ್ಮ ಪಾರಮ್ಯ ಮೆರೆದಿದ್ದರು.

ಮುಖಾಮುಖಿ ದಾಖಲೆ:
ಕಳೆದ ಒಂದು ದಶಕದಿಂದ ನಡೆದ ಈ ಇಬ್ಬರು ದಿಗ್ಗಜರ ಹಣಾಹಣಿಯಲ್ಲಿ ಮರಿನ್ ಅವರದ್ದೇ ಮೇಲುಗೈ ಇತ್ತು. ಸಿಂಧು ವಿರುದ್ಧ ಆಡಿದ ಒಟ್ಟು ಪಂದ್ಯಗಳಲ್ಲಿ ಮರಿನ್ 12 ಬಾರಿ ಗೆದ್ದಿದ್ದರೆ, ಸಿಂಧು 6 ಬಾರಿ ಜಯ ಸಾಧಿಸಿದ್ದರು. 2024ರ ಸಿಂಗಾಪುರ ಓಪನ್ ಇವರಿಬ್ಬರ ನಡುವಿನ ಕೊನೆಯ ಮುಖಾಮುಖಿಯಾಗಿತ್ತು.

ಮರಿನ್ ಅವರ ನಿವೃತ್ತಿಯೊಂದಿಗೆ ಬ್ಯಾಡ್ಮಿಂಟನ್ ಅಖಾಡದಲ್ಲಿ ಒಂದು ಸ್ಫೋಟಕ ಆಟದ ಅಧ್ಯಾಯ ಅಂತ್ಯಗೊಂಡಂತಾಗಿದೆ. ಅವರ ಆಕ್ರಮಣಕಾರಿ ಶೈಲಿ ಮತ್ತು ಅಖಾಡದಲ್ಲಿನ ಅವರ ಕಿರುಚಾಟದೊಂದಿಗೆ ಎದುರಾಳಿಗಳನ್ನು ಬೆದರಿಸುವ ತಂತ್ರವನ್ನು ಬ್ಯಾಡ್ಮಿಂಟನ್ ಪ್ರೇಮಿಗಳು ಖಂಡಿತಾ ಮಿಸ್ ಮಾಡಿಕೊಳ್ಳಲಿದ್ದಾರೆ.

error: Content is protected !!