ಮಂಗಳೂರು: ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಸಭಾಂಗಣದಲ್ಲಿ ಶುಕ್ರವಾರ (ಮಾರ್ಚ್ 27) ವಿಶ್ವ ರಂಗಭೂಮಿ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಲೆ ಮತ್ತು ರಂಗಭೂಮಿ ಕ್ಷೇತ್ರದ ಗಣ್ಯರಿಗೆ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಈ ಬಾರಿಯ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ಗೆ ಕಲೆ ಮತ್ತು ರಂಗಭೂಮಿ ಕ್ಷೇತ್ರದ ಮೂವರು ಗಣ್ಯರನ್ನು ಆಯ್ಕೆ ಮಾಡಿ ಗೌರವಿಸಲಾಯಿತು. ಭರತನಾಟ್ಯ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಖ್ಯಾತ ನೃತ್ಯ ಗುರುಗಳಾದ ವಿದುಷಿ ಸುಮಂಗಲಾ ರತ್ನಾಕರ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಅನಿವಾರ್ಯ ಕಾರಣಗಳಿಂದ ಅವರು ಉಪಸ್ಥಿತರಿಲ್ಲದ ಕಾರಣ ಅವರ ಪರವಾಗಿ ಪತಿ ರತ್ನಾಕರ ರಾವ್ ಅವರು ಗೌರವ ಸ್ವೀಕರಿಸಿದರು.

ಅದರೊಂದಿಗೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ಖ್ಯಾತ ಆಹಾರೋದ್ಯಮಿ ಹಾಗೂ ಕಲಾ ಪೋಷಕ ರೋ. ಸತೀಶ್ ಬೋಳಾರ್ ಮತ್ತು ರಂಗಭೂಮಿಯ ತೆರೆಯ ಮರೆಯಲ್ಲಿ ನಿಂತು ನೂರಾರು ಕಲಾವಿದರನ್ನು ಪ್ರೋತ್ಸಾಹಿಸಿರುವ ಹಿರಿಯ ಕಲಾ ಸಂಘಟಕ ಹಾಗೂ ಸ್ವತಃ ಕಲಾವಿದರೂ ಆಗಿರುವ ಕರುಣಾಕರ ಶೆಟ್ಟಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ್ ಬೋಳಾರ್, “ಸಾಮಾನ್ಯವಾಗಿ ದೊಡ್ಡ ಗಣಿ ಧಣಿಗಳು ಬೇರೆ ಕಡೆ ಇರುತ್ತಾರೆ, ಆದರೆ ಇಂದು ನಾನು ಇಲ್ಲಿ ಚಿನ್ನದ ಗಣಿಯ ಮಧ್ಯೆಯೇ ಸನ್ಮಾನ ಸ್ವೀಕರಿಸುತ್ತಿರುವುದು ವಿಶೇಷ ಖುಷಿ ನೀಡಿದೆ. ಕಲೆ ಎನ್ನುವುದು ಮನುಷ್ಯನ ಆಂತರಿಕ ಸ್ವಾತಂತ್ರ್ಯ. ಕಲೆಯ ಒಡನಾಟವಿದ್ದರೆ ಜೀವನಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ. ತನ್ನನ್ನು ತಾನು ಮರೆತು ಇನ್ನೊಬ್ಬ ವ್ಯಕ್ತಿಯಾಗಿ ಪರಕಾಯ ಪ್ರವೇಶ ಮಾಡುವುದೇ ನಿಜವಾದ ಕಲೆ” ಎಂದು ಮಾರ್ಮಿಕವಾಗಿ ನುಡಿದರು.

ಮತ್ತೋರ್ವ ಪುರಸ್ಕೃತ ಕರುಣಾಕರ ಶೆಟ್ಟಿ ಮಾತನಾಡಿ, “ಪ್ರಶಸ್ತಿ ಎನ್ನುವುದು ನಮಗೆ ನೀಡಿದ ಚಾಟಿಯ ಏಟಿನಂತೆ. ಇದು ನಾವು ಇನ್ನೂ ಹೆಚ್ಚು ಕೆಲಸ ಮಾಡಬೇಕು ಎಂಬ ಸೂಚನೆಯನ್ನು ನೀಡುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಗರಿ ಎಂಟರ್‌ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್ ಮಾತನಾಡಿ, “ಸಾಧಕರನ್ನು ಗುರುತಿಸಿ ಗೌರವಿಸುವುದು ಅವರ ಮುಂದಿನ ಸಾಧನೆಗೆ ದೊಡ್ಡ ಪ್ರೇರಣೆಯಾಗುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ” ಎಂದು ಹಾರೈಸಿದರು. ಎಕ್ಸ್‌ಪರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು ಅವರು ಪ್ರತಿಯೊಬ್ಬರಲ್ಲೂ ಅಡಗಿರುವ ಕಲೆಯನ್ನು ಬೆಳೆಸುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಅವರು ರಂಗಸಂಗಾತಿ ಸಂಸ್ಥೆಯ 18 ವರ್ಷಗಳ ಸುದೀರ್ಘ ಪಯಣವನ್ನು ಸ್ಮರಿಸಿ, ಸಹಕರಿಸಿದ ಮಲಬಾರ್ ಗೋಲ್ಡ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.
ರಂಗಸಂಗಾತಿ ಪ್ರತಿಷ್ಠಾನದ ಸಂಚಾಲಕ ಹಾಗೂ ವಕೀಲ ಶಶಿರಾಜ್ ರಾವ್ ಕಾವೂರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್ ಧನ್ಯವಾದವಿತ್ತರು.