ಮಂಜೇಶ್ವರ: ಗಡಿನಾಡು ಮಂಜೇಶ್ವರದಲ್ಲಿ ಈಗ ರಾಜಕೀಯ ಚದುರಂಗದಾಟ ಕ್ಲೈಮ್ಯಾಕ್ಸ್ ತಲುಪಿದೆ. ಯುಡಿಎಫ್ (UDF) ಮತ್ತು ಎಸ್‌ಡಿಪಿಐ (SDPI) ನಡುವೆ ನಡೆದಿದೆ ಎನ್ನಲಾದ ಆ ಒಂದು ಗುಪ್ತ ಸಂಧಾನ ಈಗ ಇಡೀ ಕ್ಷೇತ್ರದ ಚರ್ಚೆಯ ವಿಷಯ. ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಅವರಿಗೆ ತಲೆನೋವಾಗಿದ್ದ ಅವರದ್ದೇ ಹೆಸರಿನ ಅಭ್ಯರ್ಥಿ ಎಸ್‌ಡಿಪಿಐನ ಅಶ್ರಫ್ ಕೆ.ಎಂ. ಗುರುವಾರ ದಿಢೀರನೆ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.

ಈ ಹಿಂದೆ ಮಂಜೇಶ್ವರದಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪಿದ್ದ ಬಿಜೆಪಿಯ ಕೆ. ಸುರೇಂದ್ರನ್ ಅವರಿಗೆ ಈ ಬಾರಿ ಅದೃಷ್ಟ ಒಲಿಯಬಾರದು ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಈ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಮುಸ್ಲಿಂ ಲೀಗ್‌ನ ಕುನ್ಹಾಲಿಕುಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಈ ಡೀಲ್ ನಡೆದಿದೆ ಎಂದು ಸುರೇಂದ್ರನ್ ಗುಡುಗಿದ್ದಾರೆ. “ಸತೀಶನ್ ಅವರಿಗೆ ಎಸ್‌ಡಿಪಿಐ ಮತಗಳು ಬೇಡ ಎಂದು ಬಹಿರಂಗವಾಗಿ ಹೇಳುವ ಬೆನ್ನುಮೂಳೆ ಇಲ್ಲ” ಎಂದು ಸುರೇಂದ್ರನ್ ಕೆಂಡ ಕಾರಿದ್ದಾರೆ.
ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾಮಪತ್ರ ವಾಪಸ್ ಪಡೆದ ಅಶ್ರಫ್ ಕೆ.ಎಂ. ಮಾತ್ರ ತೀವ್ರ ಅಸಮಾಧಾನಗೊಂಡಿದ್ದಾರೆ. “ನನಗೆ ಇಷ್ಟವಿಲ್ಲದಿದ್ದರೂ ಪಕ್ಷದ ಒತ್ತಡಕ್ಕೆ ಮಣಿದು ಹಿಂದೆ ಸರಿದಿದ್ದೇನೆ” ಎಂದು ಹೇಳುತ್ತಲೇ ಅವರು ತಮ್ಮ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮನವಿ ಮೇರೆಗೆ ಈ ನಿರ್ಧಾರ ತಳೆಯಲಾಗಿದೆ ಎಂದು ಎಸ್‌ಡಿಪಿಐ ಸಮರ್ಥಿಸಿಕೊಂಡಿದ್ದರೂ, ಅಶ್ರಫ್ ಬೆಂಬಲಿಗರು ಮಾತ್ರ ಕೆಂಡಾಮಂಡಲವಾಗಿದ್ದಾರೆ.
ಬಿಜೆಪಿಗೆ ಪ್ಲಸ್ ಅಥವಾ ಮೈನಸ್?:
ಸುರೇಂದ್ರನ್ ಅವರಿಗೆ ಇದು ಸವಾಲೋ ಅಥವಾ ವರದಾನವೋ ಎಂಬುದು ಯಕ್ಷಪ್ರಶ್ನೆ. ಮತಗಳ ವಿಭಜನೆ ತಪ್ಪಿದರೆ ಯುಡಿಎಫ್‌ಗೆ ಲಾಭವಾಗಬಹುದು ಎಂಬುದು ಒಂದು ಲೆಕ್ಕಾಚಾರವಾದರೆ, ಈ ರೀತಿಯ ‘ಅಪವಿತ್ರ ಮೈತ್ರಿ’ಯನ್ನು ಮುಂದಿಟ್ಟುಕೊಂಡು ಹಿಂದೂ ಮತಗಳ ಧ್ರುವೀಕರಣಕ್ಕೆ ಸುರೇಂದ್ರನ್ ಈ ಬಾರಿ ಪ್ಲಾನ್ ಮಾಡಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಸೋತಿದ್ದರೂ, ಈ ಬಾರಿ ಮಂಜೇಶ್ವರದಲ್ಲಿ ಕಮಲ ಅರಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸುರೇಂದ್ರನ್ ಬಡಿಯಡ್ಕದಲ್ಲಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಮಂಜೇಶ್ವರದ ಈ ಅಶ್ರಫ್ ವರ್ಸಸ್ ಅಶ್ರಫ್ ನಾಟಕ ಈಗ ಮುಕ್ತಾಯಗೊಂಡಿದ್ದರೂ, ಇದರ ಅಸಲಿ ಪರಿಣಾಮ ಮಾತ್ರ ಮೇ ತಿಂಗಳ ಫಲಿತಾಂಶದ ದಿನವೇ ತಿಳಿಯಲಿದೆ.