
ಮಂಗಳೂರು: ರೌಡಿಶೀಟರ್ ಒಬ್ಬನನ್ನು ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಇಂದು ನಸುಕಿನ ಜಾವ ನಗರದ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ನಡೆದಿದೆ. ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್(46) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದವನು.

ಘಟನೆಯ ವಿವರ:
ನಸುಕಿನ 3.30ರ ಸುಮಾರಿಗೆ ಘಟನೆ ನಡೆದಿದ್ದು ಆರೀಫ್ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದ ಈತ ತನ್ನ ಬೈಕ್ ನಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಕಾದು ಕುಳಿತಿದ್ದ ತಂಡವು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಕಳೆದ 2022ರ ಮೇ ತಿಂಗಳಲ್ಲಿ ಆರೀಫ್ ಇದೇ ರೀತಿ ಮುಂಜಾನೆ ಬೈಕಲ್ಲಿ ಧಕ್ಕೆಗೆ ತೆರಳುತ್ತಿದ್ದ ವೇಳೆ ಟೊಪ್ಪಿ ನೌಫಾಲ್ ತಂಡವು ದಾಳಿ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಿತ್ತು.

ವಿವಾಹಿತನಾಗಿರುವ ಆರೀಫ್ ಮೂಲತ: ಕುದ್ರೋಳಿ ನಿವಾಸಿಯಾಗಿದ್ದು ಕಳೆದ ಆರೇಳು ವರುಷದಿಂದ ಕುಟುಂಬ ಸಮೇತ ಅಜ್ಜಿನಡ್ಕ ,ಮುಳ್ಳುಗುಡ್ಡೆ ಎಂಬಲ್ಲಿ ಮನೆ ಮಾಡಿ ವಾಸವಿದ್ದ. ಮೃತ ಆರೀಫ್ ಪತ್ನಿ ಮೂರು ಗಂಡು,ಒಂದು ಹೆಣ್ಣು ಮಕ್ಕಳನ್ನ ಅಗಲಿದ್ದಾನೆ.
ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎನ್. ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
