ಮಂಜೇಶ್ವರ: ಹೈವೋಲ್ಟೇಜ್ ಕಣವಾಗಿರುವ ಮಂಜೇಶ್ವರದಲ್ಲಿ ಕೊನೆಗೂ ಯುಡಿಎಫ್ (UDF) ತಂತ್ರಗಾರಿಕೆ ಫಲ ನೀಡಿದೆ. ಮುಸ್ಲಿಂ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ ತೀವ್ರ ಆತಂಕದ ನಡುವೆ, ಎಸ್‌ಡಿಪಿಐ ತನ್ನ ಅಭ್ಯರ್ಥಿ ಅಶ್ರಫ್ ಕೆ.ಎಂ. ಅವರನ್ನು ಕಣದಿಂದ ಹಿಂದೆ ಸರಿಸಿದೆ.

ಗುರುವಾರ ಬೆಳಗ್ಗೆ ಉಪ್ಪಳದಲ್ಲಿ ನಡೆದ ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರ ಹೊರಬಿದ್ದಿದೆ. ವಿಶೇಷವೆಂದರೆ, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಮತ್ತು ಎಸ್‌ಡಿಪಿಐ ಅಭ್ಯರ್ಥಿಯ ಹೆಸರುಗಳು ಒಂದೇ ಆಗಿದ್ದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಸಿ ‘ಮತ ಕಳವು’ ಮಾಡುವ ಸಂಚು ಇದಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಒತ್ತಡಕ್ಕೆ ಮಣಿದ ಎಸ್‌ಡಿಪಿಐ, ಅನಿವಾರ್ಯವಾಗಿ ‘ತ್ಯಾಗ’ದ ಹಾದಿ ಹಿಡಿದಿದೆ.

ಚರ್ಚ್ ಒತ್ತಡಕ್ಕೂ ಬಗ್ಗದ ಕೊಂಕಣಿ ಅಭ್ಯರ್ಥಿ
ಎಸ್‌ಡಿಪಿಐ ಹಿಂದೆ ಸರಿದ ಬೆನ್ನಲ್ಲೇ, ಎಲ್ಲರ ಕಣ್ಣು ಕೊಂಕಣಿ ಕ್ಯಾಥೋಲಿಕ್ ಅಭ್ಯರ್ಥಿ ಜೀನ್ ಲವಿನಾ ಮೊಂಟೆರೊ ಅವರ ಮೇಲೆ ನೆಟ್ಟಿದೆ. ಸಮುದಾಯದ ಮುಖಂಡರು ಮತ್ತು ಧರ್ಮಗುರುಗಳು ನಾಮಪತ್ರ ವಾಪಸ್ ಪಡೆಯುವಂತೆ ಅವರ ಮೇಲೆ ತೀವ್ರ ಒತ್ತಡ ಹೇರಿದ್ದರೂ, ಜೀನ್ ಅವರು ಪಟ್ಟು ಸಡಿಲಿಸಿಲ್ಲ. “ನಮಗೆ ನಮ್ಮದೇ ಆದ ಸ್ವಾಭಿಮಾನವಿದೆ, ಕಾರಣವಿಲ್ಲದೆ ನಾನು ಕಣಕ್ಕಿಳಿದಿಲ್ಲ” ಎಂದು ಹೇಳುವ ಮೂಲಕ ಅವರು ಎಲ್ಲರ ಹುಬ್ಬೇರಿಸಿದ್ದಾರೆ. ಕೊಂಕಣಿ ಲ್ಯಾಟಿನ್ ಕ್ಯಾಥೋಲಿಕರನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ದಶಕಗಳ ಬೇಡಿಕೆಯನ್ನು ರಾಜಕೀಯವಾಗಿ ಜೀವಂತವಾಗಿರಿಸಲು ಅವರು ಈ ‘ಒಂಟಿ ಹೋರಾಟ’ಕ್ಕೆ ಸಿದ್ಧರಾಗಿದ್ದಾರೆ.

ಮಂಜೇಶ್ವರ ಕ್ಷೇತ್ರವು ದೇಶದಲ್ಲೇ ಅತ್ಯಂತ ಕಡಿಮೆ ಮತಗಳ ಅಂತರದ ಗೆಲುವಿಗೆ ಹೆಸರಾಗಿದೆ. 2016ರಲ್ಲಿ ಕೇವಲ 89 ಮತಗಳು ಮತ್ತು 2021ರಲ್ಲಿ 745 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಇಲ್ಲಿ ಪರಾಭವಗೊಂಡಿದ್ದರು. ಎಸ್‌ಡಿಪಿಐ ಸುಮಾರು 6,000 ದಿಂದ 7,000 ಮತಗಳ ಹಿಡಿತ ಹೊಂದಿದ್ದು, ಇವು ಈಗ ಯುಡಿಎಫ್ ಪಾಲಾಗುವ ಸಾಧ್ಯತೆ ಇದೆ. ಆದರೆ, ಜೀನ್ ಲವಿನಾ ಅವರು ಪಡೆಯುವ ಪ್ರತಿಯೊಂದು ಮತವೂ ಯುಡಿಎಫ್‌ನ ಸಾಂಪ್ರದಾಯಿಕ ಕ್ರಿಶ್ಚಿಯನ್ ಮತಬ್ಯಾಂಕ್‌ಗೆ ಕತ್ತರಿ ಹಾಕಲಿದೆಯೇ? ಎಂಬುದು ಈಗಿನ ಪ್ರಶ್ನೆ.

ಎಸ್‌ಡಿಪಿಐ ನಿರ್ಗಮನದ ನಂತರ ಕಣದಲ್ಲಿ ಈಗ ಯುಡಿಎಫ್‌ನ ಎ.ಕೆ.ಎಂ. ಅಶ್ರಫ್, ಬಿಜೆಪಿಯ ಕೆ. ಸುರೇಂದ್ರನ್ ಮತ್ತು ಎಲ್‌ಡಿಎಫ್‌ನ ಕೆ.ಆರ್. ಜಯಾನಂದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ, ಮಂಜೇಶ್ವರ ಪಂಚಾಯತ್‌ನ ಮಾಜಿ ಅಧ್ಯಕ್ಷೆಯಾಗಿ ಪ್ರಭಾವ ಹೊಂದಿರುವ ಜೀನ್ ಲವಿನಾ ಅವರ ನಡೆ, ಈ ‘ಗಡಿಭಾಗದ ಸಮರ’ದಲ್ಲಿ ಯಾರಿಗೆ ವರವಾಗಲಿದೆ ಮತ್ತು ಯಾರಿಗೆ ಮರಣಶಾಸನವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಮಂಜೇಶ್ವರದ ಪ್ರತಿ ಮತವೂ ಈಗ ಚಿನ್ನದಷ್ಟೇ ಬೆಲೆಬಾಳುತ್ತಿದೆ!