ಬೋನಿಗೆ ಬಿದ್ದ ನೀರುಮಾರ್ಗದ ಚಿರತೆ:‌ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!

ಮಂಗಳೂರು: ಕಳೆದ ಕೆಲವು ದಿನಗಳಿಂದ ನೀರುಮಾರ್ಗ ಹಾಗೂ ಕುಡುಪು ಪರಿಸರದ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ. ಈ ಮೂಲಕ ಸ್ಥಳೀಯರ ಸುದೀರ್ಘ ಆತಂಕಕ್ಕೆ ಸದ್ಯ ತೆರೆ ಬಿದ್ದಂತಾಗಿದೆ.

ನೀರುಮಾರ್ಗದ ಕೆಲಾರೈ ಸಮೀಪ ಚಿರತೆಯ ಸಂಚಾರ ದಟ್ಟವಾಗಿರುವುದು ಕಂಡುಬಂದಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ಕೆಲವು ದಿನಗಳ ಹಿಂದೆ ಆಯಕಟ್ಟಿನ ಜಾಗದಲ್ಲಿ ಬೋನು ಅಳವಡಿಸಿದ್ದರು. ಇಂದು ಮುಂಜಾನೆ ಆಹಾರದ ಹುಡುಕಾಟದಲ್ಲಿದ್ದ ಚಿರತೆಯು ಬೋನಿನೊಳಗೆ ಪ್ರವೇಶಿಸುತ್ತಿದ್ದಂತೆ ಸೆರೆಯಾಗಿದೆ. ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಚಿರತೆಯನ್ನು ನೋಡಲು ಜಮಾಯಿಸಿದ್ದರು.

ಕುಡುಪು ಮತ್ತು ನೀರುಮಾರ್ಗ ಪರಿಸರದಲ್ಲಿ ಚಿರತೆಯು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಅಷ್ಟೇ ಅಲ್ಲದೆ, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯ ಭಯದಿಂದಾಗಿ ಸ್ಥಳೀಯರು ಸಂಜೆ 7 ಗಂಟೆಯ ನಂತರ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಶಾಲಾ ಮಕ್ಕಳು ಹಾಗೂ ತೋಟದ ಕೆಲಸಕ್ಕೆ ಹೋಗುವವರು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರ ಸಂಘಟಿತ ಪ್ರಯತ್ನದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಸ್ಥಳೀಯರು ನೀಡಿದ ನಿಖರ ಮಾಹಿತಿ ಹಾಗೂ ಅರಣ್ಯ ಇಲಾಖೆಯ ತಕ್ಷಣದ ಸ್ಪಂದನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸುವ ಮೊದಲೇ ಚಿರತೆಯನ್ನು ಸೆರೆಹಿಡಿಯಲಾಗಿದೆ.

ಸೆರೆಯಾದ ಚಿರತೆಯನ್ನು ಪಶುವೈದ್ಯರ ತಪಾಸಣೆಗೆ ಒಳಪಡಿಸಲಾಗಿದ್ದು, ಅದು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಸೂಚನೆಯಂತೆ ಚಿರತೆಯನ್ನು ಸುರಕ್ಷಿತವಾಗಿ ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

error: Content is protected !!