ಮಂಗಳೂರು: ಪ್ರಸ್ತುತ ನಡೆಯುತ್ತಿರುವ 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮಾರ್ಚ್ 30ರಂದು ನಡೆಯಬೇಕಿದ್ದ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್ 31ರ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸರ್ಕಾರದ ಹೊಸ ಅಧಿಸೂಚನೆಯ ಅನ್ವಯ, ಈ ಹಿಂದೆ ಮಾರ್ಚ್ 31ರಂದು ಘೋಷಿಸಲಾಗಿದ್ದ ಮಹಾವೀರ ಜಯಂತಿ ಸಾರ್ವತ್ರಿಕ ರಜೆಯನ್ನು ಇದೀಗ ಮಾರ್ಚ್ 30ರ ಸೋಮವಾರಕ್ಕೆ ಬದಲಾಯಿಸಲಾಗಿದೆ. ರಜೆ ದಿನಾಂಕದಲ್ಲಿನ ಈ ಮಾರ್ಪಾಡಿನಿಂದಾಗಿ, ಅಂದು ನಡೆಯಬೇಕಿದ್ದ ಪರೀಕ್ಷಾ ದಿನಾಂಕವನ್ನೂ ಬದಲಿಸುವುದು ಅನಿವಾರ್ಯವಾಗಿದೆ.


ತೃತೀಯ ಭಾಷೆ ವಿಷಯವನ್ನು ಹೊರತುಪಡಿಸಿ, ವೇಳಾಪಟ್ಟಿಯಲ್ಲಿರುವ ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಯಾವುದೇ ಬದಲಾವಣೆ ಇಲ್ಲದೆ ಮೊದಲಿನಂತೆಯೇ ನಡೆಯಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.