ಹೆಬ್ರಿ: ರಜೆಯ ಅವಧಿಯಲ್ಲಿ ಕುಟುಂಬಕ್ಕೆ ಆಸರೆಯಾಗಲು ಕೆಲಸಕ್ಕೆ ಹೋಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಏಣಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ದಾರುಣ ಘಟನೆ ಹೆಬ್ರಿಯ ಹೂತೂರುಕೆಯಲ್ಲಿ ನಡೆದಿದೆ. ಬೆಲಂಜೆ ನಿವಾಸಿ ಸಾತ್ವಿಕ್ (18) ಮೃತಪಟ್ಟ ದುರ್ದೈವಿ.

ಸಾತ್ವಿಕ್ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದನು. ಮುಂದಿನ ಪದವಿ ಶಿಕ್ಷಣದ ಖರ್ಚು ವೆಚ್ಚಗಳಿಗೆ ಮತ್ತು ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ರಜೆಯ ಸಮಯದಲ್ಲಿ ಹೂತೂರುಕೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಗುರುವಾರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಏಣಿಯಿಂದ ಸಮತೋಲನ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾತ್ವಿಕ್ ಕೊನೆಯುಸಿರೆಳೆದಿದ್ದಾನೆ.

ಸಾತ್ವಿಕ್ ಕೇವಲ ವಿದ್ಯಾರ್ಥಿಯಷ್ಟೇ ಅಲ್ಲದೆ, ಕೃಷಿ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದ್ದನು. ತನ್ನ ವಿದ್ಯಾಭ್ಯಾಸದ ಜೊತೆಗೆ ಮನೆಯ ಜವಾಬ್ದಾರಿಯನ್ನು ಅಲ್ಪ ವಯಸ್ಸಿನಲ್ಲೇ ಅರಿತುಕೊಂಡಿದ್ದ ಈತ, ಹೆತ್ತವರಿಗೆ ದೊಡ್ಡ ಆಸರೆಯಾಗಿದ್ದನು. ಶಿಕ್ಷಣ ಮುಗಿಸಿ ಉನ್ನತ ಗುರಿ ತಲುಪಬೇಕೆಂಬ ಕನಸು ಹೊತ್ತಿದ್ದ ಯುವಕ ಹೀಗೆ ಅರ್ಧದಲ್ಲೇ ಇಹಲೋಕ ತ್ಯಜಿಸಿರುವುದು ಬೆಲಂಜೆ ಗ್ರಾಮಸ್ಥರನ್ನು ಮತ್ತು ಸ್ಥಳೀಯ ಸಮುದಾಯವನ್ನು ಆಘಾತಕ್ಕೆ ದೂಡಿದೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
