ಉಡುಪಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೋರ್ವರಿಗೆ 57 ಲಕ್ಷ ರೂ.ಗಳಿಗೂ ಅಧಿಕ ವಂಚನೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ದೂರುದಾರ ಅನಿಲ್ ಫೇಸ್‌ಬುಕ್‌ನಲ್ಲಿ ಕಂಡ ವಿಡಿಯೋ ಜಾಹಿರಾತಿನ ಆಧಾರದ ಮೇಲೆ ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಈ ವೇಳೆ ಅಪರಿಚಿತರು ಇಂಟರ್‌ನ್ಯಾಶನಲ್ ರಿಪೋರ್ಟಿಂಗ್ ಎಐ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ವಿಶ್ವಾಸ ಮೂಡಿಸಿದ್ದರು. ಬಳಿಕ ಅವರನ್ನು ಮಾನವ್ ವರ್ಮ ಎಂಬ ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದರು.

ಹೆಚ್ಚಿನ ಹಣಗಳಿಸಬೇಕೆಂಬ ಉದ್ದೇಶದಿಂದ ಅನಿಲ್, ಅಪರಿಚಿತರು ವಾಟ್ಸ್ಯಾಪ್ ಗ್ರೂಪ್‌ನಲ್ಲಿ ನೀಡಿದ ವಿವಿಧ ಖಾತೆಗಳಿಗೆ 2025ರ ಡಿ.2 ರಿಂದ 2026ರ ಫೆ.9ರ ಅವಧಿಯಲ್ಲಿ ಒಟ್ಟು 57,70,945.60 ರೂ. ಹಣ ವರ್ಗಾವಣೆ ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ಮರಳಿ ನೀಡದೇ ಆರೋಪಿತರು ಮೋಸ ಮಾಡಿರುವುದು ನಂತರ ಗೊತ್ತಾಯಿತು.

ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.
