ಮಂಗಳೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ಒಳಮೀಸಲಾತಿ ವರದಿಯು ಪೂರ್ವಾಗ್ರಹ ಪೀಡಿತವಾಗಿದ್ದು, ಅವೈಜ್ಞಾನಿಕ ದತ್ತಾಂಶಗಳಿಂದ ಕೂಡಿದೆ. ದಕ್ಷಿಣ ಕನ್ನಡ-ಉಡುಪಿಯಲ್ಲಿ ಭೋವಿಗಳಿಗೆ ಜಾತಿ ಪ್ರಮಾಣಪತ್ರ ನೀಡಲು ನಿರಾಕರಿಸಲಾಗುತ್ತಿದೆ ಇದನ್ನು ವಿರೋಧಿಸಿ ಮಾರ್ಚ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ʻಬೆಂಗಳೂರು ಚಲೋʼ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಭೋವಿ ಸಮುದಾಯದ ಯುವ ಮುಖಂಡ ಪವನ್ ಕುಮಾರ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದ 1766 ಪುಟಗಳ ಈ ವರದಿಯು ಅಸ್ಪಷ್ಟ ಮತ್ತು ನ್ಯಾಯಸಮ್ಮತವಲ್ಲದ ಶಿಫಾರಸುಗಳನ್ನು ಒಳಗೊಂಡಿದೆ. ಕಳೆದ 50 ವರ್ಷಗಳ ಇತಿಹಾಸ ಮತ್ತು 101 ಸಮುದಾಯಗಳ ನೈಜ ಸ್ಥಿತಿಗತಿಗಳನ್ನು ಪರಿಗಣಿಸದೆ ಏಕಪಕ್ಷೀಯವಾಗಿ ವರದಿ ಸಿದ್ಧಪಡಿಸಲಾಗಿದೆ. ಕೂಡಲೇ ಸರ್ಕಾರ ಈ ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಮತ್ತು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭೋವಿ ಜನಾಂಗದವರು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಯನ್ನು ಪವನ್ ಕುಮಾರ್ ಪ್ರಸ್ತಾಪಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಲ್ಲಿ ಸಮುದಾಯಕ್ಕೆ ಸೌಲಭ್ಯಗಳು ಸಿಗುತ್ತಿದ್ದರೂ, ಕರಾವಳಿಯ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಇದು ಸಂವಿಧಾನಬದ್ಧ ಹಕ್ಕುಗಳ ಉಲ್ಲಂಘನೆಯಾಗಿದ್ದು, ಜಿಲ್ಲಾಡಳಿತ ಕೂಡಲೇ ಈ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ವರದಿಯಲ್ಲಿ ಭೋವಿ, ಬಂಜಾರ, ಕೊರಮ, ಕೊರಚ, ಛಲವಾದಿ ಮತ್ತು ಚರ್ಮಕಾರ ಸಮುದಾಯಗಳಿಗೆ ಅನ್ಯಾಯವಾಗಿದೆ. ಈ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಹೊಸ ಆಯೋಗ ಅಥವಾ ಸದನ ಸಮಿತಿಯನ್ನು ರಚಿಸಬೇಕು. ಎಲ್ಲಾ 101 ಉಪಜಾತಿಗಳ ಮುಖಂಡರ ಸಭೆ ನಡೆಸಿ ಚರ್ಚಿಸದೆ ವರದಿಯನ್ನು ಜಾರಿಗೊಳಿಸಲು ಮುಂದಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಳೆ ಬೆಂಗಳೂರು ಚಲೋ:
ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಾರ್ಚ್ 24ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಕಾರ್ಯಕರ್ತರು ಈ ಶಕ್ತಿ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಪವನ್ ಕುಮಾರ್ ಮಾಹಿತಿ ನೀಡಿದರು.