ಬಂಟ್ವಾಳದಲ್ಲಿ ಅಕ್ಷರ ಜಾತ್ರೆ: ಮಾ. 26ರಿಂದ ಚಿದಂಬರ ಬೈಕಂಪಾಡಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ಸಾಹಿತ್ಯ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಮಾರ್ಚ್ 26ರಿಂದ 28ರವರೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಸಾಹಿತ್ಯದ ಜೊತೆಗೆ ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಆಹಾರ ವೈವಿಧ್ಯಗಳ ಮೇಳವೇ ಅನಾವರಣಗೊಳ್ಳಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರಿ ಭಾಷಣಗಳಿಗೆ ಸೀಮಿತವಾಗದ ಈ ಸಮ್ಮೇಳನದಲ್ಲಿ ಪಟ್ಟಾಂಗ ಕಟ್ಟೆಯಲ್ಲಿ ಅಜ್ಜಿಕಥೆ, ʻಉತ್ತರ ಹೇಳಿ ಪುಸ್ತಕ ಗೆಲ್ಲಿ’ ಎಂಬ ವಿನೂತನ ಸ್ಪರ್ಧೆ ಹಾಗೂ ಗ್ರಾಮೀಣ ಪ್ರತಿಭೆಗಳ ನೃತ್ಯ ಪ್ರದರ್ಶನ ಇರಲಿದೆ. 30ಕ್ಕೂ ಅಧಿಕ ಪುಸ್ತಕ ಮಳಿಗೆಗಳ ಜೊತೆಗೆ ಕೈಮಗ್ಗ, ಕರಕುಶಲ ಮತ್ತು ಗುಡಿಕೈಗಾರಿಕೆಗಳ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆಯಲಿದೆ. ಎಂದರು.

ಮಾ.26ರಿಂದ 28ರವರೆಗೆ ಬಂಟ್ವಾಳದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮಾ. 26 (ಸಂಜೆ 4ಕ್ಕೆ) ಬಿ.ಸಿ. ರೋಡ್‌ನ ಪೊಳಲಿ ದ್ವಾರದಿಂದ ಸ್ಪರ್ಶ ಕಲಾ ಮಂದಿರದವರೆಗೆ ‘ಕನ್ನಡ ಸಾಂಸ್ಕೃತಿಕ ದಿಬ್ಬಣ’ ನಡೆಯಲಿದೆ. ಪ್ರೊ. ತುಕಾರಾಮ ಪೂಜಾರಿ ಸಮ್ಮೇಳನ ಉದ್ಘಾಟಿಸಲಿದ್ದು, ಸಂಜೆ ‘ಮೂರು ಮುತ್ತು’ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 27 (ಬೆಳಿಗ್ಗೆ 9ಕ್ಕೆ) ತಹಶೀಲ್ದಾರ್ ಜಿ. ಮಂಜುನಾಥ್ ಧ್ವಜಾರೋಹಣ ನೆರವೇರಿಸಲಿದ್ದಾರೆ. 9:45ಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರೆ, ಸಚಿವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಪ್ರೊ. ಕೆ. ಚಿನ್ನಪ್ಪ ಗೌಡ ಅವರಿಂದ 12 ನೂತನ ಕೃತಿಗಳ ಬಿಡುಗಡೆ ನಡೆಯಲಿದೆ ಎಂದರು.

ಮಾ. 28 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಬೆಳಿಗ್ಗೆಯಿಂದ ವೈದ್ಯ ವಿಜ್ಞಾನ, ರಂಗಭೂಮಿ ಮತ್ತು ಕನ್ನಡ ಶಾಲೆಗಳ ಭವಿಷ್ಯದ ಕುರಿತು ಪ್ರಮುಖ ವಿಚಾರಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 2:30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.

ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಡಾ. ಪಿ. ದಯಾನಂದ ಪೈ, ನಾಡೋಜ ಜಿ. ಶಂಕರ್, ಡಾ. ಕೆ. ಪ್ರಕಾಶ್ ಶೆಟ್ಟಿ ಬಂಡಾರ, ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ, ಪದ್ಮನಾಭ ಭಟ್ ಎಕ್ಕಾರು, ಡಾ. ಕೆ.ಎ. ಸಿದ್ದೀಕ್ ಅಡ್ಡೂರು ಸೇರಿದಂತೆ ಹಲವರಿಗೆ ‘ಕನ್ನಡ ಸಿರಿ’ ಮತ್ತು ‘ಸಾಧಕರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯನ್ನು ಸಂಸ್ಥೆಯಾಗಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಮ್ಮುಂಜೆ, ಕಾರ್ಯದರ್ಶಿ ದೇವಪ್ಪ ಕುಲಾಲ್, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ವಿನಯ ಆಚಾರ್ಯ ಉಪಸ್ಥಿತರಿದ್ದರು.

error: Content is protected !!