ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ನಾಲ್ವರು ಪ್ರಯಾಣಿಕರು ಬಲಿ; ಇಬ್ಬರು ಗಂಭೀರ

ರಾಮನಗರ: ಕೇರಳದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಇಂದು(ಮಾ.23) ಮುಂಜಾನೆ ಸಂಭವಿಸಿದೆ.

ಕೇರಳ ಮೂಲದವರಾದ ಮಹಮ್ಮದ್ ಪರಾನ್ (22) ರಫೀಜ್ (45) ಹಾಗೂ ಬೆಂಗಳೂರು ಮೂಲದವರಾದ ರಶೀದ್‌ (45) ಸಕೀರ್ (27) ಮೃತ ದುರ್ದೈವಿಗಳು. ಹಲವರಿಗೆ ಸಣ್ಣ ಪಟ್ಟ ಗಾಯಗಳಾಗಿದ್ದು, ಅಬ್ದುಲ್ ಮತ್ತು ಅಲೇಸ್ ಎಂಬುವವರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ತಕ್ಷಣವೇ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇರಳ ಮೂಲದ ಖಾಸಗಿ ಕಂಪೆನಿಗೆ ಸೇರಿದ ಬಸ್ ಆಗಿದ್ದು, ಇಂದು ಮುಂಜಾನೆ ಸುಮಾರು 4:30ರ ಸಮಯದಲ್ಲಿ ಚನ್ನಪಟ್ಟಣದ ಪುಟ್ಟಪ್ಪನದೊಡ್ಡಿ ಬಳಿ ಸಂಚರಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಚಾಲಕನ ನಿದ್ದೆ ಮಂಪರು ಅಥವಾ ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಸ್ ಅತಿ ವೇಗವಾಗಿ ಡಿವೈಡರ್‌ಗೆ ಅಪ್ಪಳಿಸಿದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಗಿರಿ ಮತ್ತು ಇನ್ಸ್‌ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!