ಬ್ರಹ್ಮಾಂಡದ ಆಚೆಗಿನ ‘ವಿಚಿತ್ರ’ ಲೋಕಗಳು: ನರಕದ ಪ್ಲಾನೆಟ್‌ನಿಂದ ‘ಸ್ಟಾರ್ ವಾರ್ಸ್’ ಜಗತ್ತಿನವರೆಗೆ ಒಂದು ರೋಚಕ ಪಯಣ!

ನಾವು ಈ ಭೂಮಿಯ ಮೇಲೆ ಕುಳಿತು ಆಕಾಶ ನೋಡುವಾಗ ನಮಗೆ ಕಾಣೋದು ಬರೀ ಚಂದಿರ ಮತ್ತು ನಕ್ಷತ್ರಗಳು ಮಾತ್ರ. ಆದರೆ ನಮ್ಮ ಈ ಪುಟ್ಟ ಸೌರಮಂಡಲದ ಆಚೆ, ಕಣ್ಣೆತ್ತಿ ನೋಡಲಾಗದಷ್ಟು ದೂರದಲ್ಲಿ ಎಂತಹ ವಿಚಿತ್ರ ಲೋಕಗಳಿವೆ ಗೊತ್ತಾ? ವಿಜ್ಞಾನಿಗಳು ಇವತ್ತಿನವರೆಗೆ ಅಂದಾಜು 5,600ಕ್ಕೂ ಹೆಚ್ಚು ಪರಗ್ರಹಗಳನ್ನು (Exoplanets) ಪತ್ತೆ ಹಚ್ಚಿದ್ದಾರೆ. ಕೆಲವು ಗ್ರಹಗಳು ಕುದಿಯುವ ಲಾವಾರಸದ ಸಮುದ್ರಗಳಾದರೆ, ಇನ್ನು ಕೆಲವು ಅಕ್ಷರಶಃ ನೀರಿನ ಲೋಕಗಳು! ಅಷ್ಟಕ್ಕೂ ಆ ವಿಚಿತ್ರ ಗ್ರಹಗಳ ಕಥೆ ಏನು? ಇಲ್ಲಿದೆ ನೋಡಿ:

ಇದು ಅಕ್ಷರಶಃ ‘ನರಕದ ಪ್ಲಾನೆಟ್’! (55 Cancri e)


ಹೆಸರೇನೋ ವಿಚಿತ್ರವಾಗಿದೆ, ಆದರೆ ಇದರ ವಾತಾವರಣ ಕೇಳಿದ್ರೆ ನೀವು ಬೆಚ್ಚಿಬೀಳ್ತೀರಾ. ಭೂಮಿಗಿಂತ ಎಂಟು ಪಟ್ಟು ದೊಡ್ಡದಾಗಿರುವ ಈ ಗ್ರಹಕ್ಕೆ ವಿಜ್ಞಾನಿಗಳು “ಹೆಲ್ ಪ್ಲಾನೆಟ್” ಅಂತಲೇ ಹೆಸರಿಟ್ಟಿದ್ದಾರೆ. ಯಾಕಂದ್ರೆ, ಇಲ್ಲಿ ಹರಿಯೋದು ನೀರಲ್ಲ, ಕುದಿಯುವ ಲಾವಾರಸ! ಅಷ್ಟೇ ಯಾಕೆ, ಇಲ್ಲಿ ಮಳೆಯೂ ಕೂಡ ಲಾವಾರಸದ್ದೇ ಆಗುತ್ತಂತೆ! ಇಲ್ಲಿಗೆ ಪಿಕ್ನಿಕ್ ಹೋಗೋದು ಇರಲಿ, ಹತ್ತಿರ ಸುಳಿಯೋಕೂ ಸಾಧ್ಯವಿಲ್ಲ. ಇದು ನಮ್ಮಿಂದ 41 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.

ಏಲಿಯನ್‌ಗಳ ಆವಾಸಸ್ಥಾನವೇ ಈ ಜಲಲೋಕ? (K2-18 b)


ನಮ್ಮ ಸೂರ್ಯನಿಂದ 120 ಬೆಳಕಿನ ವರ್ಷಗಳ ದೂರದಲ್ಲಿರುವ ಈ ಗ್ರಹ ನಿಜಕ್ಕೂ ಕುತೂಹಲಕಾರಿ. ಯಾಕಂದ್ರೆ, ಇದು ‘ಗೋಲ್ಡಿಲಾಕ್ಸ್ ಝೋನ್’ನಲ್ಲಿದೆ. ಅಂದ್ರೆ, ಇಲ್ಲಿ ಜೀವಿಗಳು ಬದುಕಲು ಬೇಕಾದ ಹದವಾದ ತಾಪಮಾನವಿದೆ. ಜೇಮ್ಸ್ ವೆಬ್ ಟೆಲಿಸ್ಕೋಪ್ ಇತ್ತೀಚೆಗೆ ಇಲ್ಲಿ ನೀರಿನ ಸಾಗರವಿದೆ ಅನ್ನೋದನ್ನ ಪತ್ತೆ ಮಾಡಿದೆ. ವಿಶೇಷ ಅಂದ್ರೆ, ಭೂಮಿಯ ಮೇಲೆ ಕೇವಲ ಜೈವಿಕ ಜೀವಿಗಳಿಂದ ಮಾತ್ರ ಬಿಡುಗಡೆಯಾಗುವ ‘ಡೈಮಿಥೈಲ್ ಸಲ್ಫೈಡ್’ ಅನ್ನೋ ರಾಸಾಯನಿಕ ಇಲ್ಲಿ ಪತ್ತೆಯಾಗಿದೆ! ಅಂದ್ರೆ, ಈ ನೀರಿನ ಒಳಗೆ ಯಾವುದೋ ನಿಗೂಢ ಜೀವಿಗಳು ಅಡಗಿರಬಹುದಾ? ಅನ್ನೋದು ಈಗ ವಿಜ್ಞಾನಿಗಳ ಮುಂದಿರೋ ದೊಡ್ಡ ಪ್ರಶ್ನೆ.

‘ಸ್ಟಾರ್ ವಾರ್ಸ್’ನ ಟ್ಯಾಟೂಯಿನ್ ನೆನಪಿಸುವ ಗ್ರಹ! (Kepler-16b)

Kepler-16 b - NASA Science
ನೀವು ‘ಸ್ಟಾರ್ ವಾರ್ಸ್’ ಸಿನಿಮಾ ನೋಡಿದ್ರೆ ಅದರಲ್ಲಿ ಲೂಕ್ ಸ್ಕೈವಾಕರ್‌ನ ಗ್ರಹ ನೆನಪಿರಬಹುದು. ಆ ಗ್ರಹಕ್ಕೆ ಎರಡು ಸೂರ್ಯರಿದ್ದರು! ವಿಜ್ಞಾನಿಗಳು ಈಗ ಅಂತಹದ್ದೇ ಒಂದು ಗ್ರಹವನ್ನ ಪತ್ತೆ ಮಾಡಿದ್ದಾರೆ. ಅದುವೇ ಕೆಪ್ಲರ್-16ಬಿ. ಇದು ಒಂದೇ ಬಾರಿಗೆ ಎರಡು ನಕ್ಷತ್ರಗಳನ್ನ ಸುತ್ತುತ್ತದೆ! ಆದರೆ ಒಂದು ಬೇಸರದ ವಿಷಯ ಅಂದ್ರೆ, ಇದು ಶನಿ ಗ್ರಹದಂತೆ ಅನಿಲಗಳಿಂದ ಕೂಡಿದ ಬೃಹತ್ ಗ್ರಹ. ಇಲ್ಲಿ ಕಾಲಿಡೋಕೆ ಗಟ್ಟಿ ನೆಲವೇ ಇಲ್ಲ. ಹಾಗಾಗಿ ಜೆಡಿ ಮಾಸ್ಟರ್‌ಗಳೂ ಕೂಡ ಇಲ್ಲಿ ಪೆಚ್ಚು ಹೊಡೆಯೋದು ಗ್ಯಾರಂಟಿ!

error: Content is protected !!