ನ್ಯೂಯಾರ್ಕ್: ಅದು ಅಮೆರಿಕದ ಲಾ ಗಾರ್ಡಿಯಾ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್. ಅಲ್ಲಿನ ಏರ್ ಟ್ರಾಫಿಕ್ ಕಂಟ್ರೋಲರ್ (ATC) ಅಧಿಕಾರಿಯ ಧ್ವನಿಯಲ್ಲಿ ಅತೀವ ಆತಂಕ ಮತ್ತು ಪ್ರಾಣಭಯವಿತ್ತು. ಹತ್ತಿರದಲ್ಲೇ ಇದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನಕ್ಕೆ ಟ್ರಕ್ ಒಂದು ಅಪ್ಪಳಿಸುವುದನ್ನು ಕಂಡ ಅವರು, ಅಕ್ಷರಶಃ ಕಿರುಚುತ್ತಾ ಚಾಲಕನಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೆ ಆ ಅಧಿಕಾರಿಯ ಸತತ ಕಿರುಚಾಟದ ನಡುವೆಯೇ ಮಹಾದುರಂತವೊಂದು ಸಂಭವಿಸಿಬಿಟ್ಟಿದೆ!

ಆತಂಕದ ಆ ಸೆಕೆಂಡುಗಳು!
ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ಆಡಿಯೋ ಕ್ಲಿಪ್ ಕೇಳಿದರೆ ಎಂತಹವರಿಗೂ ಎದೆ ನಡುಗುತ್ತದೆ. ಆರಂಭದಲ್ಲಿ ಶಾಂತವಾಗಿದ್ದ ಕಂಟ್ರೋಲರ್ ಧ್ವನಿ, ಒಮ್ಮೆಲೇ ಏರಿತು… “ಟ್ರಕ್ 1 ಮತ್ತು ಕಂಪೆನಿ… ಡೆಲ್ಟಾದಲ್ಲಿ 4ನೇ ಹಂತ ದಾಟಲು ವಿನಂತಿಸುತ್ತಿದ್ದೇವೆ…” ಎಂದ ಅಧಿಕಾರಿ, ಮುಂದಿನ ಕ್ಷಣವೇ ಪರಿಸ್ಥಿತಿಯ ಗಂಭೀರತೆ ಅರಿತು ಕಿರುಚಲು ಶುರು ಮಾಡಿದರು.
“ನಿಲ್ಲಿಸಿ! ನಿಲ್ಲಿಸಿ! ನಿಲ್ಲಿಸಿ! ಟ್ರಕ್ ನಂಬರ್ 1, ತಕ್ಷಣ ನಿಲ್ಲಿಸಿ! ಸ್ಟಾಪ್.. ಸ್ಟಾಪ್.. ಟ್ರಕ್ 1 ಸ್ಟಾಪ್!” ಎಂದು ಅಧಿಕಾರಿ ಪದೇ ಪದೇ ಕೂಗುತ್ತಿರುವುದು ಆಡಿಯೋದಲ್ಲಿದೆ.
ಆದರೆ, ಈ ಎಚ್ಚರಿಕೆ ಟ್ರಕ್ ಚಾಲಕನಿಗೆ ತಲುಪುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಕಣ್ಣು ಮುಚ್ಚಿ ಬಿಡುವುದರೊಳಗೆ ಟ್ರಕ್ ಹೋಗಿ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.

ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ!
ಮಾಂಟ್ರಿಯಲ್‌ನಿಂದ ಬಂದಿದ್ದ ಸಿಆರ್‌ಜೆ-900 (CRJ-900) ವಿಮಾನದಲ್ಲಿ ಆ ಸಮಯದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ವಿಮಾನವು ಸುಮಾರು 39 ಕಿಲೋಮೀಟರ್ ವೇಗದಲ್ಲಿ ಟ್ಯಾಕ್ಸಿ ವೇನಲ್ಲಿ ಚಲಿಸುತ್ತಿದ್ದಾಗ ಈ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ವಿಮಾನದ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ದೊಡ್ಡ ಮಟ್ಟದ ಹಾನಿಯಾಗಿದೆ.

ವಿಮಾನವು ಇಳಿದು ನಿಲ್ದಾಣದತ್ತ ಬರುತ್ತಿದ್ದ ಕಾರಣ ವೇಗ ಕಡಿಮೆ ಇತ್ತು. ಇಲ್ಲದಿದ್ದರೆ ಅತಿದೊಡ್ಡ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಿಕ್ಕಿ ಸಂಭವಿಸಿದ ತಕ್ಷಣ ಏರ್‌ಪೋರ್ಟ್‌ನಲ್ಲಿ ‘ಗ್ರೌಂಡ್ ಸ್ಟಾಪ್’ ಘೋಷಿಸಲಾಯಿತು ಮತ್ತು ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು.

ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಈಗ ಈ ಘಟನೆಯ ತನಿಖೆ ಕೈಗೆತ್ತಿಕೊಂಡಿದೆ. ಕಂಟ್ರೋಲರ್ ಅಧಿಕಾರಿ ಅಷ್ಟೊಂದು ಬಾರಿ ಕಿರುಚಿದರೂ ಟ್ರಕ್ ಚಾಲಕನಿಗೆ ಅದು ಕೇಳಿಸಲಿಲ್ಲವೇ? ಅಥವಾ ಸಂವಹನದಲ್ಲಿ ತಾಂತ್ರಿಕ ದೋಷವಿತ್ತೇ? ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ.
