ಮಂಜಲ್ಪಾದೆಯ ನಿಗೂಢ ಆಕೃತಿಯ ಅಸಲಿ ಜಾತಕ ಬಯಲು: ಮಂಗಳೂರನ್ನೇ ನಡುಗಿಸಿದ ಆ ‘ಕಿಲಾಡಿ’ ತಮಾಷೆಯ ಇಂಟರೆಸ್ಟಿಂಗ್ ಕಥೆ!

ಮಂಗಳೂರು: ಕತ್ತಲಾದ ಮೇಲೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಆ ನಿಗೂಢ ಆಕೃತಿ ಯಾರು? ಸ್ಕೂಟರ್‌ನಿಂದ ಬಿದ್ದ ಯುವಕನ ಮೈಮೇಲೆ ಮೂಡಿದ ಆ ವಿಚಿತ್ರ ಬಾಸುಂಡೆಗಳ ರಹಸ್ಯವೇನು? ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡದ ಮಂಜಲ್ಪಾದೆ ಮತ್ತು ಆಲಾಡಿ ಪರಿಸರದಲ್ಲಿ ‘ಬ್ರಹ್ಮರಕ್ಕಸ’ನ ಭೀತಿ ಹುಟ್ಟಿಸಿದ್ದ ಆ ಪ್ರೇತಾತ್ಮದ ಅಸಲಿ ಮುಖವಾಡ ಈಗ ಕಳಚಿ ಬಿದ್ದಿದೆ!

ಕರಾವಳಿಯ ಜನರ ನಿದ್ದೆಗೆಡಿಸಿದ್ದ ಈ ಹಾರರ್ ಸಿನೆಮಾ ಮಾದರಿಯ ಘಟನೆಯ ಹಿಂದೆ ಇದ್ದದ್ದು ಯಾವುದೇ ಪ್ರೇತಾತ್ಮವಲ್ಲ, ಬದಲಾಗಿ ಒಬ್ಬ ‘ಅತೀ ಬುದ್ಧಿವಂತ’ ಗೆಳೆಯ ಹೂಡಿದ ಸ್ಕೆಚ್!

ಅಷ್ಟಕ್ಕೂ ಆಗಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಒಂದು ತುಳು ಆಡಿಯೋ ಕ್ಲಿಪ್ ಇಡೀ ಮಂಗಳೂರನ್ನೇ ಬೆಚ್ಚಿಬೀಳಿಸಿತ್ತು. “ರಾತ್ರಿ 12 ಗಂಟೆಗೆ ಪಾಂಡೇಶ್ವರದ ಫಾರಂಮಾಲ್‌ನಿಂದ ಬರುತ್ತಿದ್ದ ಯುವಕನಿಗೆ ಮಂಜಲ್ಪಾದೆ ರಸ್ತೆಯಲ್ಲಿ ಬಿಳಿ ಬಟ್ಟೆ ಧರಿಸಿದ, ಉದ್ದನೆಯ ಬೆರಳುಗಳ ವಿಚಿತ್ರ ಆಕೃತಿ ಕಾಣಿಸಿಕೊಂಡಿದೆ. ಭಯದಿಂದ ಆತ ಸ್ಕೂಟರ್‌ನಿಂದ ಬಿದ್ದಿದ್ದಾನೆ, ಆತನ ಬೆನ್ನಿನ ಮೇಲೆ ದೆವ್ವ ಹೊಡೆದ ಗುರುತುಗಳಿವೆ” ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಜೊತೆಗೆ ವೈರಲ್ ಆದ ಅಸ್ಪಷ್ಟ ಫೋಟೋಗಳು ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದವು.

ಬಯಲಾದ ಅಸಲಿ ಗುಟ್ಟು!
ಈ ನಿಗೂಢತೆಯ ಬೆನ್ನತ್ತಿದಾಗ ತಿಳಿದುಬಂದ ಸತ್ಯ ಯಾವುದೇ ಸಿನೆಮಾ ಕಥೆಗಿಂತ ಕಮ್ಮಿಯಿಲ್ಲ. ಈ ಇಡೀ ರಾದ್ಧಾಂತದ ಸೂತ್ರಧಾರ ಒಬ್ಬ ಯುವಕ. ಆತನ ಗೆಳೆಯನಿಗೆ ಒಂದು ಕೆಟ್ಟ ಅಭ್ಯಾಸವಿತ್ತು—ಅದೆಷ್ಟೇ ಬುದ್ಧಿ ಹೇಳಿದರೂ ಪ್ರತಿದಿನ ತಡರಾತ್ರಿ ಮನೆಗೆ ಬರುವುದು!

ಮಂಗಳೂರಿನಲ್ಲಿ ‘ಪ್ರೇತ’ದ ಅಟ್ಟಹಾಸ?: ಯುವಕನ ಬೆನ್ನ ಮೇಲೆ ಬಾಸುಂಡೆ ಬರಿಸಿದ ನಿಗೂಢ ಆಕೃತಿ! ಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ!

ತನ್ನ ಗೆಳೆಯನ ಈ ಅಭ್ಯಾಸ ಬಿಡಿಸಲು ಆ ‘ಕಿಲಾಡಿ’ ಗೆಳೆಯ ಒಂದು ಪ್ಲಾನ್ ಮಾಡಿದ. ತನ್ನ ಫೋನಿನಲ್ಲಿ ಗಂಭೀರವಾಗಿ ಧ್ವನಿ ಬದಲಿಸಿ, “ಲೇಯ್, ಆ ಕಡೆ ಬರಬೇಡ… ಬಿಳಿ ಆಕೃತಿ ಓಡಾಡ್ತಿದೆ, ಯಾರಿಗೋ ಹೊಡೆತ ಬಿದ್ದಿದೆ!” ಎಂದು ತುಳುವಿನಲ್ಲಿ ರೆಕಾರ್ಡ್ ಮಾಡಿ ಗೆಳೆಯನಿಗೆ ಕಳುಹಿಸಿದ. ಗೆಳೆಯನನ್ನು ಹೆದರಿಸಿ ಬೇಗ ಮನೆಗೆ ಬರುವಂತೆ ಮಾಡುವುದು ಆತನ ಉದ್ದೇಶವಾಗಿತ್ತು.

ಕ್ಷಮೆ ಕೇಳಿದ ಯುವಕ
ಆದರೆ, ಆ ಒಂದು ಆಡಿಯೋ ಮೆಸೇಜ್ ಗೆಳೆಯನ ಕೈಯಿಂದ ಜಾರಿ ವಾಟ್ಸಾಪ್ ಗ್ರೂಪ್‌ಗಳಿಗೆ ತಲುಪಿದ್ದೇ ತಡ, ಅದಕ್ಕೆ ರೆಕ್ಕೆಪುಕ್ಕ ಮೂಡಿತು. ಎಲ್ಲಿಂದಲೋ ಸಿಕ್ಕ ಅಸ್ಪಷ್ಟ ಫೋಟೋಗಳು ಅದಕ್ಕೆ ಅಂಟಿಕೊಂಡವು. ನೋಡನೋಡುತ್ತಿದ್ದಂತೆ ಸಾಮಾನ್ಯ ‘ತಮಾಷೆ’ಯೊಂದು ‘ಬ್ರಹ್ಮರಕ್ಕಸ’ನ ಭೀತಿಯಾಗಿ ಬದಲಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಆ ಕಿಲಾಡಿ ಯುವಕ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ.

“ನನಗೆ ಸೋಷಿಯಲ್ ಮೀಡಿಯಾ ಸರಿಯಾಗಿ ಬಳಸಲು ಬರುವುದಿಲ್ಲ. ಕೇವಲ ಗೆಳೆಯನಿಗೆ ಕಳಿಸಿದ ಮೆಸೇಜ್ ಇಷ್ಟೊಂದು ವೈರಲ್ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಮಂಜಲ್ಪಾದೆ ಎಂಬುದು ದೈವೀ ಶಕ್ತಿ ಇರುವ ಜಾಗ, ಇಲ್ಲಿ ಕಾರಣಿಕದ ದೈವಗಳಿವೆ, ಅಜ್ಜ (ಕೊರಗಜ್ಜ) ಇದ್ದಾನೆ. ಹಾಗಾಗಿ ಯಾರೂ ಹೆದರುವ ಅಗತ್ಯವಿಲ್ಲ,” ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಈ ಘಟನೆಯು ನಮಗೆ ಒಂದು ದೊಡ್ಡ ಪಾಠ ಕಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಫೋಟೋ ಅಥವಾ ಆಡಿಯೋ ನಿಜವಲ್ಲ. ನಿಮ್ಮ ಒಂದು ಸಣ್ಣ ತಮಾಷೆ ಇಡೀ ನಗರದ ನೆಮ್ಮದಿಯನ್ನೇ ಕೆಡಿಸಬಹುದು. ಒಟ್ಟಿನಲ್ಲಿ, ಮಂಜಲ್ಪಾದೆಯ ಆ ‘ನಿಗೂಢ ಆಕೃತಿ’ ಈಗ ಮಾಯವಾಗಿದೆ, ಜನರು ಮತ್ತೆ ನಿರಾಳವಾಗಿ ಓಡಾಡುವಂತಾಗಿದೆ.

error: Content is protected !!