ಮಂಗಳೂರಿನಲ್ಲಿ ‘ಪ್ರೇತ’ದ ಅಟ್ಟಹಾಸ?: ಯುವಕನ ಬೆನ್ನ ಮೇಲೆ ಬಾಸುಂಡೆ ಬರಿಸಿದ ನಿಗೂಢ ಆಕೃತಿ! ಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ!

ಮಂಗಳೂರು: ಕರಾವಳಿಯ ಜನರಲ್ಲಿ ಈಗ ʻನಿಗೂಢ ಆಕೃತಿ’ಯೊಂದರ ಭೀತಿ ನಿದ್ದೆಗೆಡಿಸಿದೆ.  ಮಂಜಲ್ಪಾದೆ  ಹಾಗೂ ಆಲಾಡಿ ಪರಿಸರದಲ್ಲಿ ರಾತ್ರಿ ವೇಳೆ ನಡೆದಿದೆ ಎನ್ನಲಾದ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಭಯಾನಕ ಫೋಟೋಗಳು ಮತ್ತು ತುಳು ಆಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಬಿಳಿ ಬಟ್ಟೆ ಧರಿಸಿದ ದೆವ್ವದಂತಹ ರೂಪ, ವಿಚಿತ್ರವಾಗಿ ಬೆಳೆದ ಬೆರಳುಗಳು ಮತ್ತು ಕುಳಿ ಬಿದ್ದ ಕಣ್ಣುಗಳಿರುವ ಅಸ್ಪಷ್ಟ ಆಕೃತಿಯಿದೆ. ಇದಕ್ಕಿಂತಲೂ ಹೆಚ್ಚಾಗಿ, ಯುವಕನ ಮೈಮೇಲೆ ಯಾರೋ ಬಾಸುಂಡೆ ಬರುವಂತೆ ಹೊಡೆದ ಚಿತ್ರಗಳು ಜನರ ನಡುಕಕ್ಕೆ ಕಾರಣವಾಗಿವೆ. ಇದರೊಂದಿಗೆ ʻಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ! ಈ ಯುವಕನಿಗೆ ಈ ಸ್ಥಿತಿ ಉಂಟಾಗಿದೆʼ ಎಂಬ ತುಳು ಭಾಷೆಯ ಆಡಿಯೋವೊಂದು ವೈರಲ್ ಆಗುತ್ತಿದ್ದು, ಘಟನೆಯ ಭೀಬತ್ಸತೆಯನ್ನು ವಿವರಿಸುತ್ತಿದೆ.

ನಡುರಾತ್ರಿ ನಡೆದಿದ್ದೇನು?
ವೈರಲ್ ಆಡಿಯೋದ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 12:00 ಗಂಟೆಯ ಸಮಯದಲ್ಲಿ ಯುವಕನೊಬ್ಬ ಪಾಂಡೇಶ್ವರದ ಫಾರಂಮಾಲ್‌ನಿಂದ ಗಾಡಿ ಹೊರಡಿತ್ತು. ಯುವಕ ಮಂಜಲ್ಪಾದೆ ಆಲಾಡಿ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ರಸ್ತೆಯ ಸ್ವಲ್ಪ ದೂರದಲ್ಲಿ ಬಿಳಿ ಬಣ್ಣದ ವಿಚಿತ್ರ ಆಕೃತಿಯೊಂದು ಹಠಾತ್ತಾಗಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ತೀವ್ರವಾಗಿ ಬೆಚ್ಚಿಬಿದ್ದ ಸವಾರ, ಭಯದ ಆಘಾತದಲ್ಲಿ ಚಲಿಸುತ್ತಿದ್ದ ಸ್ಕೂಟರ್‌ನಿಂದಲೇ ಕೆಳಕ್ಕೆ ಹಾರಿದ್ದಾನೆ. ಈ ಆಕಸ್ಮಿಕ ಘಟನೆಯಿಂದ ಯುವಕನಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿರುವುದು ಮಾತ್ರವಲ್ಲದೆ, ಆತನ ಮೈಮೇಲೆ ವಿಚಿತ್ರ ಗುರುತುಗಳಾಗಿವೆ ಎಂದು ಆಡಿಯೋದಲ್ಲಿ ವಿವರಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ʻರೆಡ್ ಅಲರ್ಟ್’
“ರಾತ್ರಿ 12 ಗಂಟೆಯ ನಂತರ ಮಂಜಲ್ಪಾದೆ ಆಲಾಡಿ ಪರಿಸರದಲ್ಲಿ ಯಾರೂ ಅಡ್ಡಾಡಬೇಡಿ, ಅಲ್ಲಿ ನಿಗೂಢ ಶಕ್ತಿಗಳ ಸಂಚಾರವಿದೆ” ಎಂಬ ಸಂದೇಶಗಳು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಯುವಕನಿಗೆ ಬಿದ್ದ ಹೊಡೆತದ ಗುರುತುಗಳನ್ನು ಕಂಡು ಸ್ಥಳೀಯರು ಇದು ಸಾಮಾನ್ಯ ಘಟನೆಯಲ್ಲ ಎಂದು ಚರ್ಚಿಸುತ್ತಿದ್ದಾರೆ. ಇದು ರಾವು ಗುಳಿಗ ದೈವದ ಸವಾರಿ ಎಂದೂ ಕತೆ ಕಟ್ಟುತ್ತಿದ್ದಾರೆ.

ನಿಜವೋ ಅಥವಾ ಕಿಡಿಗೇಡಿಗಳ ಪ್ಲ್ಯಾನ್?
ಕೆಲವರು ಇದನ್ನು ʻಪ್ರೇತ ಕಾಟ’ ಎಂದು ನಂಬುತ್ತಿದ್ದರೆ, ಇನ್ನು ಕೆಲವರು ಇದು ಬ್ರಹ್ಮರಾಕ್ಷಸ ಕಾಟ ಎನ್ನುತ್ತಿದ್ದಾರೆ. ಅಥವಾ ಕಿಡಿಗೇಡಿಗಳು ಈ ರೀತಿಯ ಭಯಾನಕ ಚಿತ್ರ ರೂಪಿಸಿರುವ ಸಾಧ್ಯತೆ ಇದೆ ಎಂದು ಚರ್ಚೆಯಾಗುತ್ತಿದೆ. ಆದರೆ, ವೈರಲ್ ಆಗುತ್ತಿರುವ ಫೋಟೋಗಳು ಮತ್ತು ಆಡಿಯೋ ಮಾತ್ರ ಮಂಗಳೂರು ಜನತೆಯನ್ನು ಆತಂಕದ ಸುಳಿಗೆ ದೂಡಿರುವುದು ಸತ್ಯ.

error: Content is protected !!