ಮಂಗಳೂರು ಸಿಸಿಬಿ ಭರ್ಜರಿ ಬೇಟೆ: ‌ಮದನಿನಗರದ ರೌಡಿಶೀಟರ್ ಫರಾಜ್ ಅಂಡರ್ ಅರೆಸ್ಟ್!

ಮಂಗಳೂರು: ನಗರದ ಬೀದಿಗಳಲ್ಲಿ ಕ್ರೈಮ್ ಲೋಕದ ಕರಾಳ ನೆರಳಿನಂತೆ ಓಡಾಡಿಕೊಂಡಿದ್ದ ಒಬ್ಬ ಮೋಸ್ಟ್ ವಾಂಟೆಡ್ ಆಸಾಮಿ ಈಗ ಕೊನೆಗೂ ಮಂಗಳೂರು ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ! ದೇರಳಕಟ್ಟೆಯ ಮದನಿನಗರದ ಫರಾಜ್ @ ಮೊಹಮ್ಮದ್ ಫರಾಜ್ (32). ಬಂಧಿತ ಆರೋಪಿ. ಕೊಲೆ ಯತ್ನ, ದರೋಡೆ, ಮಾದಕ ವಸ್ತು ಮಾರಾಟ, ಕಳವು.. ಹೀಗೆ ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತು ಪ್ರಕರಣಗಳ ಸರದಾರ ಈತ!

ಕಾರಾಗೃಹದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಆರೋಪ ಈತನ ಮೇಲಿದೆ. ಉಳ್ಳಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಈತನ ವಿರುದ್ಧ ಉಳ್ಳಾಲದಲ್ಲಿ 4, ಕೊಣಾಜೆಯಲ್ಲಿ 2, ಮಂಗಳೂರು ಉತ್ತರದಲ್ಲಿ 2, ಬರ್ಕೆಯಲ್ಲಿ 1 ಮತ್ತು ಉರ್ವಾ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ.

ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಮೇಲೆ, ಈ ಭೂಪ ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತನ ವಿರುದ್ಧ ಆರು ವಾರಂಟ್ ಮತ್ತು ಒಂದು ಪ್ರೊಕ್ಲಮೇಶನ್ (ಘೋಷಿತ ಅಪರಾಧಿ) ಜಾರಿಯಲ್ಲಿತ್ತು. ಆದರೆ, ಸಿಸಿಬಿ ಪೊಲೀಸರ ಗುಪ್ತ ಕಾರ್ಯಾಚರಣೆಯ ಮುಂದೆ ಈತನ ಯಾವ ಪ್ಲ್ಯಾನ್‌ಗಳೂ ವರ್ಕ್ ಆಗಲಿಲ್ಲ. ಅಂತಿಮವಾಗಿ ಈತನನ್ನು ದಸ್ತಗಿರಿ ಮಾಡಿದ ಪೊಲೀಸರು, ಮುಂದಿನ ಕಾನೂನು ಸಮರಕ್ಕಾಗಿ ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

error: Content is protected !!