ಎಪ್ಸ್ಟೀನ್ ಸಾವಿನ ಆ ರಾತ್ರಿ ನಡೆದದ್ದೇನು? ʻಆತ್ಮಹತ್ಯೆ’ ಕಥೆಯ ಹಿಂದಿದೆ ಕತ್ತು ಹಿಸುಕಿದ ಕರಾಳ ಹಸ್ತ!

ನ್ಯೂಯಾರ್ಕ್:‌ ನ್ಯೂಯಾರ್ಕ್‌ನ ಆ ಹೈ-ಸೆಕ್ಯೂರಿಟಿ ಜೈಲು… ಅಲ್ಲಿ ಗಾಳಿ ಆಡುವುದಕ್ಕೂ ಭಯಪಡಬೇಕು. ಅಂಥದ್ದರಲ್ಲಿ, ಜಗತ್ತಿನ ಅತಿರಥ ಮಹಾರಥರ ಗುಟ್ಟುಗಳನ್ನು ತನ್ನ ಜೇಬಿನಲ್ಲಿಟ್ಟುಕೊಂಡಿದ್ದ ಜೆಫ್ರಿ ಎಪ್ಸ್ಟೀನ್ ಹೆಣವಾಗಿ ಬಿದ್ದಿದ್ದ. ಜೈಲಿನ ಅಧಿಕಾರಿಗಳು “ಇದು ಆತ್ಮಹತ್ಯೆ” ಎಂದು ಫೈಲ್ ಕ್ಲೋಸ್ ಮಾಡಲು ಹೊರಟಿದ್ದರು. ಆದರೆ ಕಾಲ ಉರುಳಿದಂತೆ, ಆ ಬಿಳಿ ಹಾಳೆಗಳ ಮೇಲೆ ರಕ್ತದ ಕಲೆಗಳು ಎದ್ದು ಕಾಣುತ್ತಿವೆ!

ಈಗ ವಿಧಿವಿಜ್ಞಾನದ ಪಿತಾಮಹ ಅಂತಲೇ ಕರೆಸಿಕೊಳ್ಳುವ ಡಾ. ಮೈಕೆಲ್ ಬಾಡೆನ್ ಮತ್ತೆ ಬಾಂಬ್ ಸಿಡಿಸಿದ್ದಾರೆ. “ಅದು ನೇಣಲ್ಲ ಅದು ಅಪ್ಪಟ ಕೊಲೆ!” ಅಂತ ಅವರು ನ್ಯೂಯಾರ್ಕ್‌ನ ವೈದ್ಯಕೀಯ ವರದಿಗಳ ಮುಖಕ್ಕೆ ರಾಚುವಂತೆ ಹೇಳ್ತಿದ್ದಾರೆ.

ಕುತ್ತಿಗೆಯ ಮೂಳೆಗಳು ಸುಳ್ಳು ಹೇಳಲ್ಲ!
ಎಪ್ಸ್ಟೀನ್ ಹೆಣದ ಮರಣೋತ್ತರ ಪರೀಕ್ಷೆ ನಡೆದಾಗ ಅವನ ಕುತ್ತಿಗೆಯಲ್ಲಿ ಮೂರು ಮೂಳೆಗಳು ಮುರಿದಿದ್ದವು. ಆಡಮ್ಸ್ ಆಪಲ್ ಹತ್ತಿರದ ಹಯಾಯ್ಡ್ ಮೂಳೆ ಚೂರಾಗಿತ್ತು. ವಿಧಿ ವಿಜ್ಞಾನ ಪ್ರಕಾರ ನೇಣು ಹಾಕಿಕೊಂಡರೆ ಈ ರೀತಿ ಮೂಳೆ ಮುರಿಯುವುದು ಬಹಳ ಅಪರೂಪ. ಯಾರಾದರೂ ಕತ್ತು ಹಿಸುಕಿ ಕೊಂದರೆ ಮಾತ್ರ ಇಂಥ ಆಘಾತ ಸಾಧ್ಯ. ಆದರೂ ಅಂದಿನ ವೈದ್ಯಕೀಯ ಪರೀಕ್ಷಕಿ ಬಾರ್ಬರಾ ಸ್ಯಾಂಪ್ಸನ್ ಕೇವಲ ಐದೇ ದಿನದಲ್ಲಿ “ಆತ್ಮಹತ್ಯೆ” ಅಂತ ಸೀಲು ಹೊಡೆದಿದ್ದು ಯಾಕೆ? ಯಾರನ್ನು ಉಳಿಸಲು ಈ ಅವಸರ?

ರಾತ್ರಿಯ ʻಕಿತ್ತಳೆ’ ಮಿನುಗು ಮತ್ತು ಮಾಯವಾದ ಸೆಲ್‌ಮೇಟ್!
ಜೈಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ರೆ ಮೈ ನಡುಗುತ್ತದೆ. ಆಗಸ್ಟ್ 9ರ ಆ ರಾತ್ರಿ, ಎಪ್ಸ್ಟೀನ್ ಕೋಣೆಯ ಕಡೆಗೆ ಕಿತ್ತಳೆ ಬಣ್ಣದ ಏನೋ ಒಂದು ಮಿನುಗುತ್ತಾ ಸಾಗಿದ್ದು ಕಾಣಿಸುತ್ತದೆ. ಎಫ್‌ಬಿಐ ಅದನ್ನ ʻಲಿನ್ನನ್ ಬಟ್ಟೆ’ ಅಂತ ಕರೆಯಬಹುದು, ಆದರೆ ಸಮಯ ಮಾತ್ರ ಸುಳ್ಳು ಹೇಳಲ್ಲ. ಅಟಾರ್ನಿ ಜನರಲ್ ಬಿಲ್ ಬಾರ್ ಆ ರಾತ್ರಿ ಯಾರೂ ಆ ಕಡೆ ಹೋಗಿಲ್ಲ ಅಂದಿದ್ದರು. ಹಾಗಿದ್ರೆ ಕ್ಯಾಮರಾದಲ್ಲಿ ಕಂಡ ಆ ನೆರಳು ಯಾರದ್ದು?

ವಿಚಿತ್ರ ಎಂದ್ರೆ ಎಪ್ಸ್ಟೀನ್ ಸಾವಿನ ಹಿಂದಿನ ರಾತ್ರಿ ಅವನ ಜೊತೆಗಿದ್ದ ಸೆಲ್‌ಮೇಟ್‌ನನ್ನು ಬೇರೆಡೆಗೆ ವರ್ಗಾಯಿಸಲಾಯಿತು. ಅಲ್ಲಿಗೆ ಆತ ಒಂಟಿಯಾದ. ಗಾರ್ಡ್‌ಗಳು ಪ್ರತಿ 30 ನಿಮಿಷಕ್ಕೆ ಚೆಕ್ ಮಾಡಬೇಕಿತ್ತು, ಆದ್ರೆ ಅವರು ಗೊರಕೆ ಹೊಡೆದು ಮಲಗಿದ್ದರು. ಎಪ್ಸ್ಟೀನ್ ಹೆಣ ಸಿಕ್ಕಾಗ ಫೋಟೋ ತೆಗೆಯುವ ಮೊದಲೇ ಬಾಡಿಯನ್ನು ಅಲ್ಲಿಂದ ಸಾಗಿಸಲಾಯಿತು. ಯಾಕೆ? ಸಾಕ್ಷ್ಯ ನಾಶ ಮಾಡಲಿಕ್ಕಾ ಎನ್ನುವುದು ಈಗಿರುವ ಪ್ರಶ್ನೆ.

ಮೂರು ಮಿಲಿಯನ್ ಪುಟಗಳ ರಹಸ್ಯ!
2026ರಲ್ಲಿ ಎಪ್ಸ್ಟೀನ್ ಕೇಸಿನ ಮೂರು ಮಿಲಿಯನ್ ಪುಟಗಳ ಫೈಲ್ ಹೊರಬರಲಿದೆ. ಅಲ್ಲಿಯವರೆಗೆ ಈ ರಹಸ್ಯದ ಸುಳಿ ಬಿಚ್ಚಿಕೊಳ್ಳುವುದಿಲ್ಲ. ದೊಡ್ಡ ದೊಡ್ಡ ರಾಜಕಾರಣಿಗಳು, ಶ್ರೀಮಂತರು ಈ ಎಪ್ಸ್ಟೀನ್‌ನ ಸೆಕ್ಸ್ ಟ್ರಾಫಿಕಿಂಗ್ ಜಾಲದಲ್ಲಿ ಸಿಲುಕಿದ್ದರು. ಅವನು ಬದುಕಿದ್ದರೆ ಅವರೆಲ್ಲರ ಬಣ್ಣ ಬಯಲಾಗುತ್ತಿತ್ತು. ಹಾಗಾಗಿಯೇ ಅವನ ಧ್ವನಿ ಅಡಗಿಸಲಾಯಿತೇ?

ಅವನದ್ದು ಆತ್ಮಹತ್ಯೆಯಲ್ಲ, ವ್ಯವಸ್ಥೆ ಮಾಡಿದ ಮಹಾನ್ ಹತ್ಯೆ ಎಂಬ ಅನುಮಾನ ಈಗ ಜಗತ್ತಿನಾದ್ಯಂತ ಜಗಜ್ಜಾಹೀರಾಗಿದೆ!

error: Content is protected !!