
ಹನೂರು: ಮಲೆ ಮಾಹದೇಶ್ವರ ಬೆಟ್ಟದ ಶನೀಶ್ವರ ಸ್ವಾಮಿ ದೇವಸ್ಥಾನ ಹತ್ತಿರದ ಹಾಲು ಹಳ್ಳದ ಸಮೀಪದ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಇಂದು(ಫೆ.14) ಬೆಳಿಗ್ಗೆ ಸುಮಾರು 11 ಗಂಟೆಗೆ ಸಂಭವಿಸಿದೆ.

ರಾಮನಗರ ಮೂಲದ ಅಭಿಷೇಕ್ (20 ವರ್ಷ), ಸ್ವಾಮಿ (27), ಚಂದ್ರಶೇಖರ್ (34) , ದತ್ತರಾಜು (37), ಹಾಗೂ ಸಾರಿಗೆ ಬಸ್ ಡ್ರೈವರ್ ಹನುಮಂತಪ್ಪ (50) ನಿರ್ವಾಹಕ ವೆಂಕಟೇಶ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಮನಗರ ಪಟ್ಟಣದ ನಿವಾಸಿಗಳಾದ ಮಾದಪ್ಪನ ಭಕ್ತರು ಕಾಲುನಡಿಗೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಾಪಸ್ ಬರುವಾಗ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಳ್ಳೇಗಾಲದಿಂದ ಮಲೆ ಮಾದೇಶ್ವರನ ಬೆಟ್ಟಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ತೆರಳುತ್ತಿದ್ದಾಗ ಎರಡು ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಿಸಿ ಆಂಬುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ.
ಗಾಯಗೊಂಡ ಪ್ರಯಾಣಿಕರನ್ನು ಮಲೆ ಮಹದೇಶ್ವರನ ಬೆಟ್ಟ ಆಸ್ಪತ್ರೆ ಹನೂರು ಆಸ್ಪತ್ರೆಗಳಲ್ಲಿ ಹಾಗೂ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವರನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಮತ್ತೆ ಕೆಲವರನ್ನು ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸ್ತಾಂತರಿಸಲಾಗಿದೆ.