ಶಿವರಾತ್ರಿ ಕಳೆದ ಮೇಲೆ ಬದಲಾಗುತ್ತಾ ರಾಜ್ಯದ ಜಾತಕ? ಬಂಡೆಯ ಅಸಲಿ ಪ್ಲಾನ್ ಇಲ್ಲಿದೆ!

ಬೆಂಗಳೂರು: ರಾಜಕಾರಣದಲ್ಲಿ ಯಾವುದೂ ಅಚಾನಕ್ಕಾಗಿ ನಡೆಯುವುದಿಲ್ಲ. ಅದರಲ್ಲೂ ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಅವರು ಆಡುವ ಪ್ರತಿ ಮಾತಿನ ಹಿಂದೆ ಒಂದು ಲೆಕ್ಕಾಚಾರವಿರುತ್ತದೆ, ಒಂದು ಗುರಿ ಇರುತ್ತದೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ, ಅಜ್ಜಯ್ಯನ ಸನ್ನಿಧಿಯಲ್ಲಿ ನಿಂತು ಅವರು ಹೇಳಿದ ಈ ವಾಕ್ಯಗಳು ಹಲವು ಚಿಂತನೆಗೆ ಕಾರಣವಾಗಿದೆ.

ವೀರ ಗಂಗಾಧರ ಅಜ್ಜಯ್ಯನ ಗದ್ದುಗೆಗೆ ನಮಸ್ಕರಿಸಿ, ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದವನ್ನು ಪಡೆದರು. ಬಳಿಕ ಅಜ್ಜಯ್ಯನ ಜಾತ್ರಾ ಮಹೋತ್ಸವ – 2026ರ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಧ್ಯೆ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಗಮನಿಸಿ.

“ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂಬ ಮಾತಿದೆ. ನಾನು ಡಿಸಿಎಂ ಆಗಿ ಅಲ್ಲ, ಈ ಮಠದ ಒಬ್ಬ ಭಕ್ತನಾಗಿ, ಶ್ರೀಗಳ ಶಿಷ್ಯನಾಗಿ, ಅಜ್ಜನ ಒಬ್ಬ ಅನುಯಾಯಿಯಾಗಿ ಸೇವೆ ಮಾಡುತ್ತಿದ್ದೇನೆ.”

ಈ ಮಾತುಗಳು ಮೇಲ್ನೋಟಕ್ಕೆ ಒಬ್ಬ ಭಕ್ತನ ವಿನಯದಂತೆ ಕಂಡರೂ, ಇದರ ಆಳದಲ್ಲಿ ಕರ್ನಾಟಕ ರಾಜಕೀಯದ ದೈತ್ಯ ಆಕಾಂಕ್ಷೆಯೊಂದು ಅಡಗಿದೆ. ಈ ಮಾರ್ಮಿಕ ನುಡಿಗಳ ಹಿಂದಿರುವ ಅಸಲಿ ‘ಪೊಲಿಟಿಕಲ್ ಗೇಮ್’ ಇಲ್ಲಿದೆ ನೋಡಿ:

ʻಬೇಡುವಾಗ ಭಿಕ್ಷುಕನಾಗು’: ಪಟ್ಟಕ್ಕಾಗಿ ಅಂತಿಮ ಮೊರೆ?
ಡಿ.ಕೆ.ಶಿವಕುಮಾರ್ ಅವರಿಗೆ ಈಗ ಬೇಕಾಗಿರುವುದು ಒಂದೇ—ಅದು ಮುಖ್ಯಮಂತ್ರಿ ಪಟ್ಟ. “ಬೇಡುವಾಗ ಭಿಕ್ಷುಕನಾಗು” ಎಂಬ ಮಾತಿನ ಮೂಲಕ ಅವರು ಅಜ್ಜಯ್ಯನ ಮುಂದೆ ಆ ಸ್ಥಾನಕ್ಕಾಗಿ ಅತ್ಯಂತ ನಮ್ರತೆಯಿಂದ ‘ಭಿಕ್ಷೆ’ ಬೇಡುತ್ತಿದ್ದಾರೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಅಂದರೆ, ಮನುಷ್ಯ ಪ್ರಯತ್ನ ಮುಗಿದಿದೆ, ಈಗ ದೈವಬಲವೊಂದೇ ಬಾಕಿ ಇದೆ ಎಂಬ ಸಂಕೇತವಿದು.

ʻಕೊಟ್ಟು ಕೊರಗಬೇಡ’: ತ್ಯಾಗದ ನೋವಿನ ಇಣುಕು ನೋಟ!
ಸರ್ಕಾರ ರಚನೆಯಾದಾಗ ತಾವು ಪಟ್ಟ ಸಾಹಸ, ಅನುಭವಿಸಿದ ಕಷ್ಟ ಎಲ್ಲವನ್ನೂ ಬದಿಗಿಟ್ಟು ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡಿದ್ದಕ್ಕೆ ಡಿಕೆಶಿ ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ‘ಕೊರಗು’ ಇದೆಯೇ? “ಕೊಟ್ಟು ಕೊರಗಬೇಡ” ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆಯೇ ಅಥವಾ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ.

ʻಡಿಸಿಎಂ ಆಗಿ ಅಲ್ಲ, ಶಿಷ್ಯನಾಗಿ…’: ಅಧಿಕಾರಕ್ಕಿಂತ ಶಕ್ತಿ ದೊಡ್ಡದು!
ಅವರು “ನಾನು ಡಿಸಿಎಂ ಆಗಿ ಬಂದಿಲ್ಲ” ಅಂದಾಗ, ಅದರ ಅರ್ಥ ತಮಗೆ ಈಗಿರುವ ಅಧಿಕಾರ ತೃಪ್ತಿ ನೀಡಿಲ್ಲ ಎಂದೇ ಆಗುತ್ತದೆ. ಅಜ್ಜಯ್ಯನ ಮೇಲೆ ತಮಗಿರುವ ಅಚಲ ನಂಬಿಕೆಯನ್ನು ಪ್ರದರ್ಶಿಸುವ ಮೂಲಕ, ತಮಗೆ ಶಕ್ತಿ ಸಿಕ್ಕರೆ ಅದನ್ನು ‘ಸೇವೆ’ಗಾಗಿ ಬಳಸುತ್ತೇನೆ ಎಂಬ ಭರವಸೆಯನ್ನು ಸಮುದಾಯಕ್ಕೆ ಮತ್ತು ತಮ್ಮ ಬೆಂಬಲಿಗರಿಗೆ ದಾಟಿಸುತ್ತಿದ್ದಾರೆ.

ಶಕ್ತಿ ಪ್ರದರ್ಶನದ ಹೊಸ ತಂತ್ರ
ಮಠವನ್ನು “ಇನ್ನೂ ಎತ್ತರಕ್ಕೆ ಬೆಳೆಸಲು ಕೈಜೋಡಿಸೋಣ” ಎನ್ನುವ ಮೂಲಕ ಆ ಭಾಗದ ಪ್ರಭಾವಿ ಲಿಂಗಾಯತ ಮಠದ ಶ್ರೀಗಳ ಮತ್ತು ಭಕ್ತರ ವಿಶ್ವಾಸ ಗಳಿಸಲು ಡಿಕೆಶಿ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಬೇಕಾದ ಸಾಮಾಜಿಕ ಸಮತೋಲನದ ಲೆಕ್ಕಾಚಾರವೂ ಇದರಲ್ಲಿದೆ.

ಡಿ.ಕೆ.ಶಿವಕುಮಾರ್ ಅವರು “ಮುಂದೇನಾಗುತ್ತೆ ಅಂತ ಚರ್ಚಿಸಲ್ಲ, ಏನ್ ಮಾಡ್ಬೇಕು ಅಂತ ಯೋಚಿಸ್ತಿದ್ದೀನಿ” ಅಂದ ಮೇಲೆ, ಅಲ್ಲಿಗೆ ಯಾವುದೋ ಒಂದು ಅಧ್ಯಾಯ ಮುಗಿದು ಹೊಸ ಅಧ್ಯಾಯ ಶುರುವಾಗಲಿದೆ ಅಂತಲೇ ಅರ್ಥ. ಶಿವರಾತ್ರಿಯ ನಂತರ ಕರ್ನಾಟಕದ ರಾಜಕೀಯ ಹವಾಮಾನ ಬದಲಾಗುತ್ತಾ? ಅಜ್ಜಯ್ಯ ಇವರಿಗೆ ‘ವರ’ ಕೊಡುತ್ತಾರಾ? ಗಡಿಯಾರದ ಮುಳ್ಳು ಉರುಳುತ್ತಿದೆ, ಡಿಕೆಶಿ ಅವರ ‘ಚಿಂತನೆ’ಯ ಫಲಿತಾಂಶ ಅಷ್ಟೇ ವೇಗವಾಗಿ ಹೊರಬರಲಿದೆ!

error: Content is protected !!