
ಮಂಗಳೂರು: ಮಂಗಳೂರಿನಿಂದ ಶಿರ್ವಕ್ಕೆ ಬರುತ್ತಿದ್ದ ಮಾರುತಿ ಡಿಸೈರ್ ಕಾರಿನಲ್ಲಿ ರಸ್ತೆ ಮಧ್ಯದಲ್ಲೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸೋಮವಾರ(ಫೆ.09) ಮಧ್ಯರಾತ್ರಿ ಇಲ್ಲಿನ ನ್ಯಾರ್ಮ ಶ್ರೀ ಜಾರಂದಾಯ ದೈವಸ್ಥಾನದ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಶಿರ್ವದತ್ತ ಸಾಗುತ್ತಿದ್ದ ಕಾರು ನ್ಯಾರ್ಮ ಪರಿಸರಕ್ಕೆ ತಲುಪುತ್ತಿದ್ದಂತೆ ಇಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಅದರಲ್ಲಿದ್ದ ಮನೆಯ ನಾಲ್ವರು ಸದಸ್ಯರನ್ನು ತಕ್ಷಣವೇ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಎಲ್ಲರೂ ಕೆಳಗಿಳಿಯುತ್ತಿದ್ದಂತೆ ಬೆಂಕಿ ಇಡೀ ಕಾರನ್ನು ಆವರಿಸಿದ್ದು, ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬಂದಿದ್ದು, ಅಕ್ಕಪಕ್ಕದ ಮನೆಗಳಿಂದ ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅಷ್ಟರಲ್ಲಿ ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡು ಕಾರು ಸುಟ್ಟು ಭಸ್ಮವಾಗಿದೆ.