ಫರಿದಾಬಾದ್: ಅಯೋಧ್ಯೆಯ ಆ ಭವ್ಯ ರಾಮಮಂದಿರದ ಮೇಲೆ ಬಾಂಬ್ ಎಸೆಯಬೇಕೆಂದು ಸ್ಕೆಚ್ ಹಾಕಿದ್ದ. ಕೈಯಲ್ಲಿ ಪಾಕಿಸ್ತಾನಿ ಐಎಸ್‌ಐ ಕೊಟ್ಟ ಗ್ರೆನೇಡ್‌ಗಳಿದ್ದವು. ಎದೆಯೊಳಗೆ ದ್ವೇಷದ ಕಿಚ್ಚಿತ್ತು. ಆಟೋ ಡ್ರೈವರ್ ಸೋಗಿನಲ್ಲಿ ಫರೀದಾಬಾದ್ ಬೀದಿಗಳಲ್ಲಿ ಅಡ್ಡಾಡುತ್ತಾ ಮಂದಿರದ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದ ಅಬ್ದುಲ್ ರೆಹಮಾನ್ ಎಂಬ ಉಗ್ರನ ಆಟ ಈಗ ಜೈಲಿನ ಕತ್ತಲಲ್ಲೇ ಕೊನೆಯಾಗಿದೆ!

ಜೈಲಿನಲ್ಲಿ ನಡೆದ ಆ ಒಂದು ಜಗಳ…
ಫರೀದಾಬಾದ್ ಜೈಲಿನ ಕಲ್ಲು ಗೋಡೆಗಳ ಮಧ್ಯೆ ಭಾನುವಾರ ರಾತ್ರಿ ಒಂದು ಹೈಡ್ರಾಮಾ ನಡೆದಿದೆ. ಈ ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ಎಂಬ ಸಹ ಕೈದಿಯ ನಡುವೆ ಸಣ್ಣ ವಿಷಯಕ್ಕೆ ಕಿಡಿ ಹೊತ್ತಿಕೊಂಡಿದೆ. ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ರಾತ್ರಿ ಎಂಟು ಗಂಟೆಯ ಆ ಸಮಯ… ಅರುಣ್ ಚೌಧರಿ ಎಂಬ ಆ ಸಾಬೀತು ಪಡಿಸದ ʻಯಮ’ನಿಗೆ ಎಲ್ಲಿಲ್ಲದ ಕೋಪ ನೆತ್ತಿಗೇರಿದೆ. ಕೈಗೆ ಸಿಕ್ಕ ಹರಿತವಾದ ಆಯುಧದಿಂದ ಈ ಉಗ್ರನ ತಲೆಗೇ ಬಲವಾದ ಏಟು ಕೊಟ್ಟು ಮುಗಿಸಿದ್ದಾನೆ.

ಅಯೋಧ್ಯೆಗೆ ಸ್ಕೆಚ್ ಹಾಕಿದ್ದ ‘ಆಟೋವಾಲಾ’
ಗುಜರಾತ್ ATS ಮತ್ತು ಹರಿಯಾಣ STF ಕಳೆದ ವರ್ಷ ಮಾರ್ಚ್‌ನಲ್ಲಿ ಈತನನ್ನು ಬೇಟೆಯಾಡಿದ್ದರು. ಈತನ ಜೇಬಲ್ಲಿದ್ದಿದ್ದು ಆಟೋ ರಿಕ್ಷಾ ಲೈಸೆನ್ಸ್ ಅಲ್ಲ, ಬದಲಾಗಿ ಭಾರತದ ಅಸ್ಮಿತೆಯ ಮೇಲೆ ದಾಳಿ ಮಾಡುವ ಡಿಜಿಟಲ್ ನಕ್ಷೆಗಳು! ಪಾಕಿಸ್ತಾನದ ಮಾಸ್ಟರ್ ಮೈಂಡ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಈತ, ರಾಮಮಂದಿರವನ್ನು ಧ್ವಂಸಗೊಳಿಸಿ ರಕ್ತಪಾತ ಹರಿಸುವ ಕನಸು ಕಂಡಿದ್ದ.

ಆದರೆ ಕಾಲನ ಲೆಕ್ಕಾಚಾರವೇ ಬೇರೆ ಇತ್ತು. ಅಯೋಧ್ಯೆಯ ಮಣ್ಣನ್ನು ಮುಟ್ಟುವ ಮುನ್ನವೇ ಈತನ ಮೆದುಳು ಜೈಲಿನ ನೆಲದ ಮೇಲೆ ಹರಿದುಹೋಗಿದೆ. ಆಸ್ಪತ್ರೆಗೆ ಸಾಗಿಸುವ ಮೊದಲೇ ಈ ಭಯೋತ್ಪಾದಕನ ಉಸಿರು ಗಾಳಿಯಲ್ಲಿ ಲೀನವಾಗಿತ್ತು.
ಈಗ ಜೈಲು ಅಧಿಕಾರಿಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ. ಜೈಲಿನೊಳಗೆ ಆಯುಧ ಬಂದಿದ್ದಾದರೂ ಹೇಗೆ? ಅರುಣ್ ಚೌಧರಿ ಕೇವಲ ಸಿಟ್ಟಿನಿಂದ ಹೊಡೆದನಾ ಅಥವಾ ಇದರ ಹಿಂದೆ ಬೇರೆ ಏನಾದರೂ ಕಥೆ ಇದೆಯಾ? ವಿಚಾರಣೆ ನಡೆಯುತ್ತಿದೆ. ಒಟ್ಟಿನಲ್ಲಿ, ರಾಮನ ಮಂದಿರದ ಮೇಲೆ ಕಣ್ಣಿಟ್ಟವನ ಅಂತ್ಯ ಮಾತ್ರ ಅನಾಮಧೇಯವಾಗಿ, ಅನಾಥವಾಗಿ ಜೈಲಿನ ಮುಚ್ಚಿದ ಕೋಣೆಯಲ್ಲಿ ಮುಗಿದುಹೋಗಿದೆ.
