
ಕಾಸರಗೋಡು: 24 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಚಿನ್ನು ಪಪ್ಪು ನಿನ್ನೆ ಸಂಜೆ ವೇಳೆಗೆ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಕಾಸರಗೋಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಸರಗೋಡು ಶೈಲಿಯ ಭಾಷೆ ಹಾಗೂ ಸ್ಥಳೀಯ ಆಹಾರದ ವಿಡಿಯೋಗಳಿಂದ ವೈರಲ್ ಆಗಿದ್ದ ಇವರು, ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು.
ಚಿನ್ನು ಪಾಪು ನಿಜವಾದ ಹೆಸರು ಕೆ. ರೇಷ್ಮಾ. ಕೇರಳದ ಈ ಯುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಕಡಿಮೆ ಸಮಯದಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಮೂಲತಃ ಅಡೂರಿನವರಾಗಿದ್ದ ಇವರು ಕಾಸರಗೋಡು ನಗರದ ಬಳಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಚಿನ್ನು, ತಮ್ಮ ಶಾರ್ಟ್ ವಿಡಿಯೋಗಳಿಂದಲೇ ಹೆಚ್ಚು ಪರಿಚಿತರಾಗಿದ್ದರು. ಅವರ ತುಳು ಮಲಯಾಳಂ ಭಾಷೆಯ ವಿಡಿಯೋಗಳು ವೀಕ್ಷಕರ ಗಮನ ಸೆಳೆದಿತ್ತು.
ರೇಷ್ಮಾ ಪ್ರೀತಿಸಿ ಮದುವೆಯಾಗಿದ್ದು ತಿಂಗಳ ಹಿಂದೆಯಷ್ಟೇ ವಿಚ್ಛೇದನವಾಗಿತ್ತು ಎಂದು ಆಪ್ತ ಮೂಲಗಳು ತಿಳಿಸಿವೆ. ಅವರಿಗೆ ನಾಲ್ಕು ವರ್ಷದ ಮಗನಿದ್ದು, ಸದ್ಯ ಅಜ್ಜ-ಅಜ್ಜಿ ಜೊತೆಗಿದ್ದಾನೆ. ನಿನ್ನೆ ಚಿನ್ನು ಪಾಪು ಕಾಸರಗೋಡಿನ ತಮ್ಮ ಬಾಡಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.