ಪುತ್ತೂರು ಆಮಂತ್ರಣ ಪತ್ರ ವಿವಾದ- ʻವೋಟಿಗೆ ಮುಸ್ಲಿಮರು ಬೇಕು; ಕಾರ್ಡ್‌ಗೆ ಬೇಡವಾ ಶಾಸಕರೇ?́

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ. ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಕಟ್ಟಬೇಕು ಅಂತ ಹಗಲು-ರಾತ್ರಿ ಕನಸು ಕಾಣುತ್ತಿದ್ದಾರೆ. ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಅದ್ಧೂರಿಯಾಗಿ ಶಿಲಾನ್ಯಾಸ ಮಾಡೋಕೆ ಪ್ಲಾನ್ ರೆಡಿ ಆಯ್ತು. ಆದರೆ ಆಮಂತ್ರಣ ಪತ್ರಿಕೆ ಹೊರಬಂದಾಗ ಅಸಲಿ ಆಟ ಶುರುವಾಗಿದೆ. ಅಚ್ಚರಿ ಅಂದ್ರೆ ಕಾಂಗ್ರೆಸ್ ಎಂಬ ಮಹಾ ವೃಕ್ಷಕ್ಕೆ ನೀರೆರೆದ ಮುಸ್ಲಿಂ ನಾಯಕರ ಹೆಸರೇ ಆ ಕಾರ್ಡ್‌ನಲ್ಲಿ ಕಾಣೆಯಾಗಿದೆ!

ಪುತ್ತೂರಿನಲ್ಲಿ ಕಾಂಗ್ರೆಸ್ ಅಂದ್ರೆ ಅಲ್ಲಿ ಮುಸ್ಲಿಂ ಕಾರ್ಯಕರ್ತರ ಬೆವರಿನ ವಾಸನೆ ಇರುತ್ತೆ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಮಾಡಿದ ʻಕೈ’ಚಳಕ ಇದೆಯಲ್ಲ, ಅದು ಈಗ ಜಿಲ್ಲಾದ್ಯಂತ ಜ್ವಾಲಾಮುಖಿ ಸ್ಫೋಟಿಸುವಂತೆ ಮಾಡಿದೆ. ಮಹಮ್ಮದ್ ಆಲಿ, ನವಾಝ್, ಶಾಹುಲ್, ಗಫೂರ್… ಹೀಗೆ ಸಾಲು ಸಾಲು ನಾಯಕರನ್ನು ಆಮಂತ್ರಣ ಪತ್ರಿಕೆಯಿಂದ ಹೊರಗಿಟ್ಟು, ಅವರನ್ನೇ ಮರೆತುಬಿಟ್ಟಿದ್ದಾರೆ. ಇವರೆಲ್ಲರೂ ವೋಟು ಹಾಕೋಕೆ ಬೇಕು, ಆದರೆ ಕಾರ್ಡ್‌ನಲ್ಲಿ ಹೆಸರು ಹಾಕೋಕೆ ಜಾಗ ಇಲ್ವಾ? ಅಂತ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ʻರೈ’ ಸಾಹೇಬರ ಬೆಂಡೆತ್ತುತ್ತಿದ್ದಾರೆ.

ಯಾವಾಗ ವಿವಾದ ಜೋರಾಯಿತೋ, ಜಿಲ್ಲಾ ಕಾಂಗ್ರೆಸ್ ನಾಯಕರು ತೇಪೆ ಹಚ್ಚೋಕೆ ಹೋದರು. ಅರ್ಜೆಂಟಾಗಿ ಇನಾಯತ್ ಆಲಿ ಹೆಸರನ್ನು ಸೇರಿಸಿ ಕಾರ್ಡ್ ರೀ-ಪ್ರಿಂಟ್ ಮಾಡಿಸಿದರು. ಆದರೆ ಒಂದು ತೂತು ಮುಚ್ಚೋಕೆ ಹೋದರೆ ಹತ್ತು ತೂತುಗಳು ಕಾಣಿಸಿಕೊಂಡಂತೆ, ಉಳಿದ ನಾಯಕರ ಕಥೆಯೇನು? ಶಹೀದ್ ಅವರ ಹೆಸರೇನು ಪಟ್ಟಿಯಲ್ಲಿ ಬರಬಾರದಿತ್ತಾ? ಅಂತ ಮುಸ್ಲಿಂ ಮುಖಂಡರು ಕೆಂಡಕಾರುತ್ತಿದ್ದಾರೆ.

“ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಬೇಡ” ಅಂತ ಡಿ.ಕೆ. ಶಿವಕುಮಾರ್ ಅವರು ಏರ್‌ಪೋರ್ಟ್‌ನಲ್ಲಿ ಫಿಲಾಸಫಿ ಹೇಳುತ್ತಿದ್ದಾರೆ. ಆದರೆ ಪುತ್ತೂರಿನ ಮಣ್ಣಿನಲ್ಲಿ ಈಗ ಸಿದ್ಧಾಂತಕ್ಕಿಂತ ಹೆಚ್ಚಾಗಿ ʻಅಸಮಾಧಾನ’ದ ವಾಸನೆ ಬಡಿಯುತ್ತಿದೆ. ಅಶೋಕ್ ರೈ ಅವರ ಈ ಮರೆಗುಳಿತನವೋ ಅಥವಾ ಬೇಕಂತಲೇ ಮಾಡಿದ ಪ್ಲಾನೋ ಗೊತ್ತಿಲ್ಲ, ಆದರೆ ಕೆಳಹಂತದ ಕಾರ್ಯಕರ್ತರಲ್ಲಿ ಇದು ದೊಡ್ಡ ಬಿರುಕು ಮೂಡಿಸಿರೋದಂತೂ ಸತ್ಯ.

ಕಚೇರಿ ಕಟ್ಟೋಕೆ ಮುಂಚೆಯೇ ಪಕ್ಷದೊಳಗೆ ಅಸಮಾಧಾನದ ಗೋಡೆಗಳು ಎದ್ದು ನಿಂತಿವೆ. ಬಾಸ್, ಅಡಿಗಲ್ಲು ಹಾಕೋಕೆ ಬಂದಿರೋ ಡಿಕೆಶಿಗೆ ಈ ʻಕೈ’ ನಾಯಕರ ಕಿತ್ತಾಟ ನೋಡಿದರೆ ಏನನಿಸಿರಬೇಡ? ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಏಳುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಆಮಂತ್ರಣ ಪತ್ರಿಕೆಯ ಈ ಅವಾಂತರ ಮಾತ್ರ ಹಳೇ ಮೈಸೂರಿನ ಹೋಟೆಲ್ ಮಸಾಲೆ ದೋಸೆಯಂತೆ ಘಮಘಮಿಸುತ್ತಿದೆ!

error: Content is protected !!