ಮಂಗಳೂರು: ಕೇಂದ್ರ ಸರಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ಯಾವುದೇ ದೂರದೃಷ್ಟಿಯಿಲ್ಲದ, ಸಾಮಾನ್ಯ ಜನತೆಗೆ ನಿರಾಶೆ ಉಂಟುಮಾಡುವ ಬಜೆಟ್ ಆಗಿದೆ ಎಂದು ಶಾಸಕರು, ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ. ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.

“ವಿಕಸಿತ ಭಾರತ ಎಂಬುದು ಕೇವಲ ಘೋಷಣೆಯಾಗಿ ಉಳಿದಿದ್ದು, ಬಜೆಟ್‌ನಲ್ಲಿ ಅದಕ್ಕೆ ತಕ್ಕ ಸ್ಪಷ್ಟ ರೂಪರೇಖೆಯೂ ಇಲ್ಲ. ದೇಶದ ಜನತೆಗೆ ಮತ್ತೊಮ್ಮೆ ನಿರಾಶೆ ಮೂಡಿಸಿರುವ ಬಜೆಟ್ ಇದು” ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಪ್ರಮುಖ ಯೋಜನೆಗಳಾದ ಮೇಕೆದಾಟು ಯೋಜನೆಗೆ ಇನ್ನೂ ಅನುಮತಿ ನೀಡಿಲ್ಲ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಇದರಿಂದ ಕೇಂದ್ರ ಸರಕಾರ ರಾಜ್ಯಕ್ಕೆ ತೀವ್ರ ಅನ್ಯಾಯ ಮಾಡಿದ್ದು, ಕರ್ನಾಟಕಕ್ಕೆ ಕೇವಲ ‘ಚೊಂಬು’ ನೀಡಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲದೆ, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಜೊತೆಗೆ ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವಂತಹ ಯಾವುದೇ ಗುಣಾತ್ಮಕ ನಿರ್ಧಾರಗಳು ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ ಎಂದು ಡಾ. ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಈ ಬಜೆಟ್ ಜನಪರವಾಗಿಲ್ಲ, ರಾಜ್ಯಪರವಾಗಿಲ್ಲ ಹಾಗೂ ಭವಿಷ್ಯ ದೃಷ್ಟಿಯ ಕೊರತೆಯಿರುವ ಬಜೆಟ್ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.