
ಬೆಂಗಳೂರು: ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಮಿಯ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣದ ಹಿಂದೆ ನೇಪಾಳ ಮೂಲದ ಗ್ಯಾಂಗ್ ಕೈವಾಡ ಇರುವುದು ಬಯಲಾಗಿದೆ. ನೇಪಾಳದ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಬಳಿಕ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಿದ್ದರು. ದರೋಡೆ ಮಾಡುವ ಒಂದು ತಿಂಗಳ ಮುನ್ನ ನೆಪ ಹೇಳಿ ಕೆಲಸ ಬಿಡುತ್ತಿದ್ದರು. ಈ ವೇಳೆ ಬೇರೆ ಇಬ್ಬರನ್ನು ಕೆಲಸಕ್ಕೆ ಸೇರಿಸುತ್ತಿದ್ದರು. ಉದ್ಯಮಿ ಶಿವಕುಮಾರ್ ಅವರ ಮನೆಗೂ ಗ್ಯಾಂಗ್‌ನ ಕಮಲ ಹಾಗೂ ದಿನೇಶ್ ಎಂಬವರನ್ನು ಕೆಲಸಕ್ಕೆ ಸೇರಿಸಿದ್ದರು.
ಸಮಯ ನೋಡಿ ಈ ಗ್ಯಾಂಗ್ ಉದ್ಯಮಿಯ ಮನೆ ದರೋಡೆ ಮಾಡಿ ಪರಾರಿಯಾಗಿತ್ತು. ಡಿಸೆಂಬರ್‌ನಲ್ಲಿ ದಿನೇಶ್ ಮತ್ತು ಗ್ಯಾಂಗ್ ಪುಣೆಯಲ್ಲಿ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ದರೋಡೆ ಮಾಡಿದೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.