ಕೊಳ್ಳೇಗಾಲ: ವರನಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್, ವಧುವಿನಿಂದಲೇ ಸುಫಾರಿ!

ಕೊಳ್ಳೇಗಾಲ: ಮದುವೆ ಸಮಾರಂಭಕ್ಕೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ತಂಡವೊಂದು ಚಾಕು ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವರನಿಗೆ ಚಾಕು ಇರಿಯಲು ವಧುವೇ ಸುಫಾರಿ ಕೊಟ್ಟಿದ್ದು ತನಿಖೆಯಲ್ಲಿ ಬಯಲಾಗಿದೆ. ಜ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ ಮದುವೆ ನಡೆಯಬೇಕಿತ್ತು. ರವೀಶ್‌ ಹೊಸ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದರು. ಹಿಂದಿನ ದಿನ ರಿಸೆಪ್ಶನ್‌ಗೆ ರವೀಶ್‌ ಸೇರಿದಂತೆ ಸಂಬಂಧಿಕರು ಕಲ್ಯಾಣ ಮಂಟಪದತ್ತ ಹೊರಟಿದ್ದರು. ಕೊಳ್ಳೇಗಾಲದ ವೆಂಕಟೇಶ್ವರ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಪು ರವೀಶ್‌ ಕಾರನ್ನು ಅಡ್ಡಗಟ್ಟಿ ಗಲಾಟೆ ತೆಗೆದು ಚಾಕು ಇರಿದು ಪರಾರಿಯಾಗಿತ್ತು. ಗಾಯಗೊಂಡಿದ್ದ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಪೊಲೀಸರು ನಯನಳ ಕರೆ ಡಿಟೇಲ್ಸ್‌ ತೆಗೆದಾಗ ಶಾಕ್‌ ಆಗಿದ್ದಾರೆ. ಚಾಕು ಇರಿದ ಆರೋಪಿಗಳ ಜೊತೆ ಆಕೆ ಸಂಪರ್ಕದಲ್ಲಿದ್ದ ವಿಚಾರ ಗೊತ್ತಾಗಿದೆ. ಮೊದಲ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಎರಡು ವರ್ಷಗಳಿಂದ ನಯನಳನ್ನು ಪ್ರೀತಿಸುತ್ತಿದ್ದ. ಇದರ ನಡುವೆಯೂ ನಯನಗೆ ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯವಾಗಿತ್ತು. ನಂತರ ರವೀಶ್‌ನ ಮೊಬೈಲ್‌ ನಂಬರ್ ಅನ್ನು ಆರೋಪಿ ದರ್ಶನ್‌ಗೆ ನೀಡಿ ಬೆದರಿಕೆ ಹಾಕಿ ಮದುವೆ ನಿಲ್ಲಿಸುವಂತೆ ನಯನಾ ಒತ್ತಡ ಹೇರಿದ್ದಳು. ಕೊನೆಗೆ ಮದುವೆ ನಿಲ್ಲಿಸಲು ಕೊನೆಯ ಪ್ರಯತ್ನ ಎನ್ನುವಂತೆ ನಯನ ತನ್ನ ತಂಗಿಯ ಮೊಬೈಲ್‌ನಿಂದ ಪ್ರಿಯಕರ ದರ್ಶನ್‌ಗೆ ಕರೆ ಮಾಡಿ ವರನನ್ನು ಹತ್ಯೆ ಮಾಡುವಂತೆ ಹೇಳಿದ್ದಳು. ಪೊಲೀಸರು ನಯನ, ನಯನಳ ಪ್ರೇಮಿ ದರ್ಶನ್ ಹಾಗು ಮಿಥುನ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

error: Content is protected !!