ʻಕೊರಗಜ್ಜ ́ ಪ್ರಮೋಷನ್‌ನಲ್ಲಿ ಒಳಜಗಳ?: ಮಮುಟ್ಟಿ ಎಂಟ್ರಿಯಿಂದ ಕಬೀರ್ ಬೇಡಿಗೆ ಮುಜುಗರ!

ಮಂಗಳೂರು/ಕೊಚ್ಚಿ: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ “ಕೊರಗಜ್ಜ” ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಕೊಚ್ಚಿಯಲ್ಲಿ ನಡೆಯಬೇಕಿದ್ದ ಚಿತ್ರದ ಅದ್ಧೂರಿ ಪ್ರಮೋಷನ್ ಕಾರ್ಯಕ್ರಮ, ಮಲಯಾಳಂ ಸೂಪರ್‌ಸ್ಟಾರ್ ಮಮುಟ್ಟಿ ಅವರ ಅಚ್ಚರಿ ಎಂಟ್ರಿಯಿಂದ ಹೈಡ್ರಾಮಾಗೆ ಕಾರಣವಾಗಿದೆ.

ಕೊರಗಜ್ಜ ಚಿತ್ರದ ಪ್ರಮೋಷನ್ ಸಲುವಾಗಿ ಕೊಚ್ಚಿಯ ‘ಹಾಲಿಡೇ ಇನ್’ ಪಂಚತಾರಾ ಹೋಟೆಲ್‌ನಲ್ಲಿ ಭರ್ಜರಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಒಂದು ವಾರಗಳ ಮೊದಲೇ ಎಲ್ಲಾ ಮಲಯಾಳಂ ಮಾಧ್ಯಮಗಳಿಗೆ ಆಹ್ವಾನ ರವಾನೆಯಾಗಿತ್ತು. ಆದರೆ ಕಾರ್ಯಕ್ರಮದ ಮುನ್ನಾ ದಿನ ತಡರಾತ್ರಿ, “ಕಾರ್ಯಕ್ರಮ ರದ್ದು ಮಾಡಿ ಅಥವಾ ಮುಂದೂಡಿ” ಎಂಬ ಸಂದೇಶ ಕೊರಗಜ್ಜ ಚಿತ್ರತಂಡಕ್ಕೆ ಬಂದಿದೆ ಎನ್ನಲಾಗಿದೆ.

Koragajja: Gopi Sundar Creates New Genre

ಗಾಸಿಪ್ ಕಾರಿಡಾರ್‌ಗಳ ಪ್ರಕಾರ, ಅದೇ ದಿನ ಮತ್ತು ಅದೇ ಸಮಯದಲ್ಲಿ ಮಮುಟ್ಟಿ ಅಭಿನಯದ ಮಲಯಾಳಂ ಚಿತ್ರದ ಪ್ರಮೋಷನ್ ಅನ್ನು ಹಠಾತ್ ಆಗಿ ಫಿಕ್ಸ್ ಮಾಡಲಾಗಿದೆ. ಮಮುಟ್ಟಿ ಭಾಗವಹಿಸುವ ಕಾರ್ಯಕ್ರಮಕ್ಕೆ ಎಲ್ಲಾ ಪ್ರಮುಖ ಮಾಧ್ಯಮಗಳು ಹೋಗುತ್ತಾರೆ ಎಂಬ ಲೆಕ್ಕಾಚಾರದಿಂದ, ಕೊರಗಜ್ಜ ಪತ್ರಿಕಾಗೋಷ್ಠಿಗೆ ಪತ್ರಕರ್ತರು ಬರೋದಿಲ್ಲ ಎಂಬ ಆತಂಕ ಹುಟ್ಟಿತ್ತು.

ಆದರೆ ಇಲ್ಲಿ ಟ್ವಿಸ್ಟ್ ಏನಂದ್ರೆ – ಹಾಲಿವುಡ್-ಬಾಲಿವುಡ್‌ನ ಹಿರಿಯ ನಟ ಕಬೀರ್ ಬೇಡಿ ಈಗಾಗಲೇ ಕೊಚ್ಚಿಗೆ ಲ್ಯಾಂಡ್ ಆಗಿದ್ದರು! ಜೊತೆಗೆ ಹೋಟೆಲ್ ಬುಕ್ಕಿಂಗ್, ಡಿನ್ನರ್ ಮೀಟ್, ಐಷಾರಾಮಿ ರೂಮ್ಸ್ ಎಲ್ಲದರ ಬಿಲ್‌ ಚುಕ್ತಾ ಮಾಡಲಾಗಿತ್ತು! ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಕೊರಗಜ್ಜ ಚಿತ್ರತಂಡ ಈಗ ಸಂಕಷ್ಟಕ್ಕೆ ಸಿಲುಕಿತು.

“ಒಬ್ಬ ಸ್ಟಾರ್ ಇದ್ದರೆ ಎಲ್ಲವೂ ಅವರಿಗೇ” ಅನ್ನೋ ಧೋರಣೆ ಇದೇನಾ? ಎಂಬ ಪ್ರಶ್ನೆ ಈಗ ಫಿಲ್ಮ್ ವಲಯದಲ್ಲಿ ಕೇಳಿ ಬರುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಪಿಆರ್ ಒಗಳ ನಡುವೆ ಹೊಂದಾಣಿಕೆ ಇರುತ್ತದೆ. ಒಂದೇ ಸಮಯದಲ್ಲಿ ಎರಡು ದೊಡ್ಡ ಪ್ರಮೋಷನ್‌ಗಳು ಕ್ಲ್ಯಾಶ್ ಆಗದಂತೆ ನೋಡಿಕೊಳ್ಳುವುದು ಅಲಿಖಿತ ನಿಯಮ. ಆದರೆ ಈ ಬಾರಿ ಆ ನಿಯಮವೇ ಮುರಿದಿದೆಯಾ ಎಂಬ ಚರ್ಚೆ ಶುರುವಾಗಿದೆ.

ಈ ವಿಚಾರಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಸುಧೀರ್ ಅತ್ತಾವರ್, “ಪವರ್ ಇದೆ ಅಂದ್ರೆ ಏನು ಬೇಕಾದ್ರೂ ಮಾಡ್ಬೋದೇ?” ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ಭಾಷಾ ಆಧಾರಿತ ಅಸಮಾಧಾನಕ್ಕೂ ಕಾರಣವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನೊಂದೆಡೆ, ಸದಾ ಸಂಯಮದಿಂದ ಮಾತನಾಡುವ ಕಬೀರ್ ಬೇಡಿ ಕೂಡ ಈ ಘಟನೆಯನ್ನು “ಮೋಸ್ಟ್ ಅನ್ಫಾರ್ಚುನೇಟ್” ಎಂದು ಹೇಳಿದ್ದಾರೆ. “ನಾನು ಮಲಯಾಳಂ ಸಿನಿಮಾಗಳ ಅಭಿಮಾನಿ. ಗೌರವದಿಂದಲೇ ಕೊಚ್ಚಿಗೆ ಬಂದೆ. ಆದರೆ ಸಡನ್ ಆಗಿ ನಿಗದಿತ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿರುವುದು ಸರಿಯೆನಿಸಲಿಲ್ಲ” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹಿರಿಯ ನಟಿ ಭವ್ಯ ಕೂಡ ಈ ಬೆಳವಣಿಗೆಯನ್ನು ಮೆಚ್ಚಿಲ್ಲ. “ರಾಷ್ಟ್ರೀಯ-ಅಂತರರಾಷ್ಟ್ರೀಯ ಖ್ಯಾತಿಯ ಕಬೀರ್ ಬೇಡಿಗೆ ಈ ರೀತಿ ಆಗಿರುವುದು ನೋವಿನ ಸಂಗತಿ” ಎಂದು ಅವರು ಹೇಳಿದ್ದಾರೆ.

ಕೊನೆಗೂ, ರಾತ್ರಿ 8 ಗಂಟೆಗೆ ನಡೆಯಬೇಕಿದ್ದ ಗ್ರ್ಯಾಂಡ್ ಡಿನ್ನರ್ ಮೀಟ್ ಸಂಜೆ 5 ಗಂಟೆಗೆ ಸೀಮಿತ ಪತ್ರಿಕಾಗೋಷ್ಠಿಯಾಗಿ ಬದಲಾಯಿತು. ಪರಿಣಾಮ? ಕೊರಗಜ್ಜ ಚಿತ್ರದ ಪ್ರಮೋಷನ್ ಪ್ಲಾನ್ ಸಂಪೂರ್ಣ ಫ್ಲಾಪ್! ಈಗ ಟಾಲಿವುಡ್-ಸ್ಯಾಂಡಲ್‌ವುಡ್-ಮೊಲಿವುಡ್ ವಲಯದಲ್ಲಿ ಒಂದೇ ಪ್ರಶ್ನೆ, ಇದು ಕೇವಲ ಟೈಮಿಂಗ್ ಮಿಸ್ಟೇಕಾ?, ಅಥವಾ ಸ್ಟಾರ್ ಪವರ್‌ನ ಶೋ ಆಫ್‌ನಾ? ಎನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ…

error: Content is protected !!