
ವಿಜಯನಗರ: ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ.

ಅಕ್ಷಯ ಕುಮಾರ ಕೊಲೆ ಮಾಡಿದ ವ್ಯಕ್ತಿ.
ಅಕ್ಷಯ ಕುಮಾರ ಬೆಂಗಳೂರಿಗೆ ತೆರಳಿ ತಂದೆ, ತಾಯಿ ಮತ್ತು ಸಹೋದರಿ ನಾಪತ್ತೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕ್ನಗರ ಠಾಣೆಗೆ ದೂರು ನೀಡಿದ್ದ. ಅನುಮಾನಗೊಂಡ ತಿಲಕ್ನಗರ ಠಾಣೆ ಪೊಲೀಸರು ಪುತ್ರನ ವಿಚಾರಣೆ ಮಾಡಿದ್ದಾರೆ. ಈ ವೇಳೆ ಕೊಲೆ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದಾನೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನೆಯಲ್ಲಿ ಮೂವರನ್ನು ಕೊಂದು ಹೂತಿದ್ದಾಗಿ ಒಮ್ಮೆ ಹೇಳಿಕೆ ನೀಡಿದರೆ, ಮತ್ತೊಮ್ಮೆ ಸಂಡೂರಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಮೃತರ ಹೆಸರು ಮತ್ತು ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸದ್ಯ ವ್ಯಕ್ತಿ ನೀಡಿದ ಅಸ್ಪಷ್ಟ ಹೇಳಿಕೆ ಬಗ್ಗೆ ಕೊಟ್ಟೂರು ಠಾಣೆಗೆ ತಿಲಕ್ನಗರ ಠಾಣೆ ಪೊಲೀಸರಿಂದ ಮಾಹಿತಿ ನೀಡಿದ್ದು, ಆ ಮಾಹಿತಿ ಆಧರಿಸಿ ವ್ಯಕ್ತಿ ಹೇಳಿರುವ ಸ್ಥಳದಲ್ಲಿ ಶವಗಳಿಗಾಗಿ ಕೊಟ್ಟೂರು ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.