
ಚಾಮರಾಜನಗರ: ಮದುವೆ ಸಂಭ್ರಮದ ವೇಳೆ ವರನಿಗೆ ವಧುವಿನ ಪ್ರಿಯಕರ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದ್ದು, ಮದುವೆ ಅರ್ಧಕ್ಕೇ ಮುರಿದು ಬಿದ್ದಿದೆ.

ವರ ರವೀಶ್ ಮದುವೆಗೆ ಸಜ್ಜಾಗಿದ್ದ ವೇಳೆ ಈ ದಾಳಿ ನಡೆದಿದ್ದು, ಪ್ರಾಣ ತೆಗೆಯುವ ಉದ್ದೇಶದಿಂದಲೇ ಚಾಕು ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರವೀಶ್ ಸದ್ಯ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯ ಹಿಂದೆ ವಧು ನಯನಾಳ ಪ್ರಿಯಕರನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಘಟನೆಯ ನಂತರ ಮದುವೆ ಮುರಿದು ಬಿದ್ದಿದ್ದರೂ, ವಧು ನಯನಾ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವೀಶ್ ಬಳಿ ಬಂದು, “ದಯವಿಟ್ಟು ನನ್ನನ್ನು ಮದುವೆಯಾಗು” ಎಂದು ಮನವಿ ಮಾಡಿದ್ದಾರೆ. ಆದರೆ, ಪ್ರಾಣಾಪಾಯದಿಂದ ಪಾರಾಗಿರುವ ರವೀಶ್ ಮದುವೆಯಾಗಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.


ಮದುವೆ ನಿರಾಕರಿಸಿದ ವರ ರವೀಶ್, “ಮದುವೆಯಾಗಲು ಬಂದಾಗಲೇ ನನ್ನ ಪ್ರಾಣ ತೆಗೆಯಲು ಯತ್ನಿಸಿದ್ದಾರೆ. ಒಂದು ವೇಳೆ ನಾನು ಈಕೆಯನ್ನೇ ಮದುವೆಯಾದರೆ ಮುಂದೆ ಇದೇ ರೀತಿ ತೊಂದರೆಯಾದಾಗ ನನ್ನ ಪ್ರಾಣಕ್ಕೆ ಯಾರು ಹೊಣೆ? ಇಂತಹ ಆತಂಕದ ನಡುವೆ ಸಂಸಾರ ಮಾಡಲು ಸಾಧ್ಯವಿಲ್ಲ,” ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.