ನೋರಾ ಫತೇಹಿ ಅಶ್ಲೀಲ ನೃತ್ಯಕ್ಕೆ ಕಾನೂನು ಸಂಕಷ್ಟ: ಜೋಗಿ‌, ಪ್ರೇಮ್ ಸೇರಿ ಚಿತ್ರತಂಡದ ವಿರುದ್ಧ ಎಫ್‌ಐಆರ್!

ಬೆಂಗಳೂರು/ಮುಂಬೈ: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʻಕೆಡಿ-ದ ಡೆವಿಲ್’ ಸಿನಿಮಾದ ‘ಸರ್ಸೆ ಸರ್ಸೆ’ ಹಾಡು ಈಗ ಕಾನೂನು ಸಂಕಷ್ಟದ ಸುಳಿಗೆ ಸಿಲುಕಿದೆ. ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳ ವಿರುದ್ಧ ಮಹಿಳಾ ಆಯೋಗವು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಚಿತ್ರತಂಡದ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ವಿವಾದ ತಾರಕಕ್ಕೇರಿದೆ.

ವಿವಾದಕ್ಕೆ ಕಾರಣವೇನು?

ಇತ್ತೀಚೆಗೆ ಬಿಡುಗಡೆಯಾದ ಈ ಹಾಡಿನ ಪ್ರೋಮೋದಲ್ಲಿ ನೋರಾ ಫತೇಹಿ ಡ್ಯಾನ್ಸ್ ಬಾರ್ ಸೆಟ್ಟಿಂಗ್‌ನಲ್ಲಿ ಅರೆಬರೆ ಉಡುಪಿನಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿಶೇಷವಾಗಿ ಈ ಹಾಡಿನ ಆರಂಭಿಕ ಸಾಲುಗಳು ದ್ವಂದ್ವಾರ್ಥದಿಂದ (Double Entendre) ಕೂಡಿದ್ದು, ಕೇಳುಗರಿಗೆ ಅಸಹ್ಯ ಹುಟ್ಟಿಸುವಂತಿವೆ ಎಂಬ ಟೀಕೆ ಕೇಳಿಬಂದಿದೆ. ಸಾಹಿತ್ಯದ ಕೆಲವು ಸಾಲುಗಳು ಮೊದಲಿಗೆ ಕಾಮಪ್ರಚೋದಕವಾಗಿ ಕೇಳಿಸಿದರೂ, ನಂತರದ ಸಾಲುಗಳಲ್ಲಿ ಅದನ್ನು ಮದ್ಯದ ಬಾಟಲಿಗೆ ಹೋಲಿಸಲಾಗಿದೆ. ಈ ರೀತಿಯ ‘ಚೀಪ್’ ಪ್ರಚಾರದ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಮಹಿಳಾ ಆಯೋಗದ ಗಂಭೀರ ಆಕ್ಷೇಪ:
ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಾಡು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಮಹಿಳಾ ಆಯೋಗ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ವಿವಾದದ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್, ಯೂಟ್ಯೂಬ್‌ನಿಂದ ಹಾಡಿನ ಹಿಂದಿ ಆವೃತ್ತಿಯನ್ನು ಈಗಾಗಲೇ ತೆಗೆದುಹಾಕಿದೆ.

ಬಂಧನದ ಭೀತಿಯಲ್ಲಿ ಚಿತ್ರತಂಡ?
ದೆಹಲಿ ಮೂಲದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಅವರು ಮುಂಬೈನಲ್ಲಿ ಈ ಸಂಬಂಧ ದೂರು ನೀಡಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 294 ಹಾಗೂ ಐಟಿ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಟಿ ನೋರಾ ಫತೇಹಿ, ನಟ ಸಂಜಯ್ ದತ್, ನಿರ್ದೇಶಕ ಜೋಗಿ ಪ್ರೇಮ್ ಮತ್ತು ಸಾಹಿತ್ಯ ಬರೆದ ರಕೀಬ್ ಆಲಂ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಅಲ್ಲದೆ, ಸೈಬರ್ ಸೆಲ್‌ನಲ್ಲೂ ದೂರು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಹಾಡನ್ನು ಸಂಪೂರ್ಣವಾಗಿ ಅಳಿಸಲು ಒತ್ತಾಯಿಸಲಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈಗಾಗಲೇ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ಸಭ್ಯ ಸಮಾಜದಲ್ಲಿ ಇಂತಹ ಅಸಭ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಗುಡುಗಿದೆ. ಒಟ್ಟಿನಲ್ಲಿ ‘ಕೆಡಿ’ ಸಿನಿಮಾದ ಈ ಹಾಡು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

error: Content is protected !!